ದಾವಣಗೆರೆ, ಸೆ. 16 – ಪ್ಯಾನ್ ಕಾರ್ಡ್ ಮಾಹಿತಿ ಪಡೆಯುವಲ್ಲಿ ಬ್ಯಾಂಕ್ ಅಲಕ್ಷ್ಯ ತೋರಿರುವ ಕಾರಣ ಗ್ರಾಹಕನಿಗೆ ಆಗಿರುವ ನಷ್ಟಕ್ಕೆ ಪರಿಹಾರ ಹಾಗೂ ವ್ಯತ್ಯಾಸದ ಹಣ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ನಗರದ ನಿವಾಸಿ ಹೆಚ್.ಎನ್. ಶಿಲ್ಪ ಅವರು ತಮ್ಮ ಇಬ್ಬರು ಅಪ್ರಾಪ್ತ ಗಂಡು ಮಕ್ಕಳ ಹೆಸರಿನಲ್ಲಿ ತಲಾ 1 ಲಕ್ಷ ರೂ. ಹಣವನ್ನು 2010ರ ಮೇ 6ರಂದು ನಗರದ ವಿದ್ಯಾನಗರದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಮಾಡಿದ್ದರು.
2020ರ ಮೇ 6ರಂದು ಬಡ್ಡಿಯೊಂದಿಗೆ ಈ ಮೊತ್ತ 4,00,326 ರೂ. ಆಗಿತ್ತು. ಆದರೆ, ಪ್ಯಾನ್ ಕಾರ್ಡ್ ಮಾಹಿತಿ ನೀಡದ ಕಾರಣಕ್ಕಾಗಿ 45,486 ರೂ.ಗಳನ್ನು ಟಿಡಿಎಸ್ ಎಂದು ಕಡಿತ ಮಾಡಲಾಗಿದೆ. 3,54,840 ರೂ. ಮಾತ್ರ ನೀಡಲಾಗುವುದು ಎಂದು ಬ್ಯಾಂಕ್‌ನವರು ತಿಳಿಸಿದರು.
ಅಪ್ರಾಪ್ತ ಗಂಡು ಮಕ್ಕಳ ಗಾರ್ಡಿಯನ್ ಆಗಿದ್ದ ಶಿಲ್ಪ ಅವರು, ನಂತರದಲ್ಲಿ 16 (ಎ) ಫಾರಂ ಭರ್ತಿ ಮಾಡುವ ಮೂಲಕ ಟಿಡಿಎಸ್ ಹಣ ಪಡೆಯಲು ಅರ್ಜಿ ದಾಖಲಿಸಿದ್ದರು. ಆದರೆ, 20 ತಿಂಗಳು ತಡವಾಗಿ ಜನವರಿ 2022ರಂದು 32,049 ರೂ. ಮಾತ್ರ ನೀಡಲಾಯಿತು. ಆದಾಯ ತೆರಿಗೆ ಇಲಾಖೆಯ ನಿಯಮದ ಪ್ರಕಾರ ಇಷ್ಟು ಮಾತ್ರ ಹಣ ಸಿಗಲಿದೆ ಎಂದು ಬ್ಯಾಂಕ್‌ನವರು ತಿಳಿಸಿದರು.
ಬ್ಯಾಂಕ್‌ನವರು ಪ್ಯಾನ್ ಕಾರ್ಡ್ ವಿವರ ಪಡೆಯದೇ ಇರುವುದೇ ಈ ಸಮಸ್ಯೆಗೆ ಮೂಲ ಕಾರಣ. ಮಕ್ಕಳು ಅಪ್ರಾಪ್ತರಾಗಿದ್ದ ಕಾರಣ, ಠೇವಣಿ ಸಮಯದಲ್ಲಿ ತಾಯಿಯ ಪ್ಯಾನ್ ಕಾರ್ಡ್ ವಿವರ ಪಡೆಯಬೇಕಿತ್ತು. ನನ್ನ ಬಳಿ ಪ್ಯಾನ್ ಕಾರ್ಡ್ ಇದ್ದರೂ ಆ ಮಾಹಿತಿಯನ್ನು ಬ್ಯಾಂಕ್‌ನವರು ಪಡೆದಿರಲಿಲ್ಲ. ಇದು ಬ್ಯಾಂಕ್‌ನವರ ಅಲಕ್ಷ್ಯ ಎಂದು ಶಿಲ್ಪ ಅವರು ಆಯೋಗದಲ್ಲಿ 2024ರ ಮಾರ್ಚ್ 5ರಂದು ಅರ್ಜಿ ದಾಖಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಸೆಪ್ಟೆಂಬರ್ 3ರಂದು ತೀರ್ಪು ನೀಡಿ ಪರಿಹಾರ ಹಾಗೂ ವ್ಯತ್ಯಾಸದ ಹಣ ನೀಡುವಂತೆ ಆದೇಶಿಸಿದೆ.
ಆದಾಯ ತೆರಿಗೆ ಇಲಾಖೆ ಮರು ಪಾವತಿಸಲು ನಿರಾಕರಿಸಿದ ಟಿಡಿಎಸ್ ಮೊತ್ತವಾದ 15,575 ರೂ., ವ್ಯತ್ಯಾಸದ ಮೊತ್ತವಾದ 13,437 ರೂ., ದೂರುದಾರೆ ಅನುಭವಿಸಿದ ಮಾನಸಿಕ ಯಾತನೆಗೆ ಪರಿಹಾರವಾಗಿ 10 ಸಾವಿರ ರೂ. ಹಾಗೂ ಖಟ್ಲೆ ವೆಚ್ಚವಾಗಿ 5 ಸಾವಿರ ರೂ.ಗಳನ್ನು ಪಾವತಿಸಬೇಕು. ಒಟ್ಟು 44,012 ರೂ.ಗಳನ್ನು ಪಾವತಿಸಬೇಕು. ಆದೇಶದ 30 ದಿನಗಳಲ್ಲಿ ಈ ಹಣವನ್ನು ಮರು ಪಾವತಿಸದೇ ಇದ್ದರೆ ಶೇ.6ರ ವಾರ್ಷಿಕ ಬಡ್ಡಿ ಪಾವತಿಸಬೇಕು ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಐ. ಶಿಗ್ಲಿ ಅವರು ತೀರ್ಪು ನೀಡಿದ್ದಾರೆ. ತೀರ್ಪು ನೀಡಿದ ಆಯೋಗದಲ್ಲಿ ಸಿ.ಎಸ್. ತ್ಯಾಗರಾಜನ್ ಹಾಗೂ ಬಿ.ಯು. ಗೀತಾ ಸದಸ್ಯರಾಗಿದ್ದಾರೆ.