ದಾವಣಗೆರೆ, ಸೆ.16- ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್ ಮಿಲಾದ್ ಹಬ್ಬವನ್ನು ನಗರಾದ್ಯಂತ ಮುಸ್ಲಿಂ ಬಾಂಧವರು ಸಡಗರ – ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಯು ಮಧ್ಯಾಹ್ನ 2.30 ಕ್ಕೆ ಆಜಾದ್ ನಗರದಲ್ಲಿ ಫಾತೀಹಾ ಖ್ವಾನಿ ಪಠಿಸಿ ಚಾಲನೆ ನೀಡಲಾಯಿತು.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್, ಮಿಲಾದ್ ಸಮಿತಿ ಅಧ್ಯಕ್ಷ ಎ.ಬಿ.ಹಬೀಬ್ ಉಲ್ಲಾಸಾಬ್, ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಾಮರಾಜಪೇಟೆ, ಮಂಡಿಪೇಟೆ, ಬಾರ್ ಲೈನ್ (ವಸಂತರಸ್ತೆ) ರೈಲ್ವೆ ಗೇಟ್ ಮೂಲಕ ಅರುಣ ಚಿತ್ರಮಂದಿರ ವೃತ್ತ ತಲುಪಿ, ವಿನೋಬನಗರ ಹಾಗೂ ಶಂಕರ್ ವಿಹಾರ್ ಬಡಾವಣೆಯಿಂದ ಬಂದ ಮುಸ್ಲಿಂ ಬಾಂಧವರು ಅಲ್ಲಿ ವೀಲಿನಗೊಂಡು, ಪಿ.ಬಿ.ರಸ್ತೆ ಮೂಲಕ ಗಾಂಧಿ ವೃತ್ತದಲ್ಲಿ ಕೆಟಿಜೆ ನಗರ, ನಿಟ್ಟುವಳ್ಳಿಯಿಂದ ಆಗಮಿಸಿದ ಇನ್ನೊಂದು ತಂಡ ಅಲ್ಲಿ ಜಮಾವಣೆಗೊಂಡು ಸಾಮೂಹಿಕವಾಗಿ ಮುಂದೆ ಸಾಗಿದವು. ತಂಜೀಮ್ ಅಧ್ಯಕ್ಷ ದಾದಾ ಪೀರ್ (ದಾದುಸೇಠ್) ಸೇರಿದಂತೆ ಪದಾಧಿಕಾರಿ ಗಳು ತಂಡ ಮಾಡಿಕೊಂಡು ಸಾಗುತಿದ್ದರು.
ಅಶೋಕ ಟಾಕೀಸ್ ರೈಲ್ವೆ ಗೇಟ್, ಕೆ.ಆರ್.ರಸ್ತೆ ಮೂಲಕ ಮಾಗಾನಹಳ್ಳಿ ರಸ್ತೆ, ಮಂಡಕ್ಕಿ ಭಟ್ಟಿ ಲೇಔಟ್, ಮಹಮ್ಮದ್ ಅಲಿ ಜೋಹರ್ ನಗರ, ಮಿಲಾದ್ ಮೈದಾನದಲ್ಲಿ ಸೇರಿ ಸಮಾರೋಪಗೊಂಡಿತ್ತು.
ಹಬ್ಬದ ಕೇಂದ್ರ ಬಿಂದು ಮದೀನಾ ಗುಂಬಜ್ ಮಂಡಿಪೇಟೆ ಬಳಿ ಬಂದಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾಲಾರ್ಪಣೆ ಮಾಡಿ, ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಹಬ್ಬದ ಶುಭಾಶಯ ಕೋರಿದರು.
ಕುರ್ತಾ ಪೈಜಾಮಾ ಧರಿಸಿಕೊಂಡು ತಲೆಗೆ ಟೋಪಿ ಕೈಯಲ್ಲಿ ಝಂಡಾ ಹಿಡಿದುಕೊಂಡು ತಮ್ಮ ಮಕ್ಕಳೊಂದಿಗೆ `ನಾರೇ ತಕಬೀರ್ ಅಲ್ಲಾಹು ಅಕ್ಬರ್’ ಎಂಬ ಘೋಷ ವಾಕ್ಯಗಳನ್ನು ಪಠಿಸುತ್ತಾ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿವಿಧ ಬಡಾವಣೆಗಳಿಂದ ತಂಡೋಪ ತಂಡವಾಗಿ ಬರುತ್ತಿದ್ದ ಮುಸ್ಲಿಂ ಬಾಂಧವರಿಗೆ ವಿವಿಧ ಸಂಘಟನೆಗಳಿಂದ ಷರಬತ್, ಹಣ್ಣು, ನೀರು ವಿತರಿಸುತ್ತಿದ್ದರು.
ಈದ್ – ಮಿಲಾದ್ ಸಮಿತಿ ಅಧ್ಯಕ್ಷ ಎ.ಬಿ.ಹಬೀಬುಲ್ಲಾ ಸಾಬ್ ಅವರ ಅಧ್ಯಕ್ಷತೆಯಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನಗರದ ಮಸೀದಿಗಳ ಉಲೇಮಾಗಳು ತಕರೀರ್ (ಉಪನ್ಯಾಸ) ಮಾಡಿದರು.
ಮುಸ್ಲಿಂ ಮುಖಂಡರಾದ ಎಸ್.ಕೆ.ಅಮ್ಜದ್, ಷಾನವಾಜ್ ಖಾನ್, ನಸೀರ್ ಅಹ್ಮದ್, ಅಕ್ಬರ್, ಪಾಲಿಕೆ ಸದಸ್ಯ ಎ.ಬಿ.ರಹೀಂ, ಮಿಲಾದ್ ಸಮಿತಿಯ ಯಾಸೀನ್ ಪೀರ್ ರಜ್ವಿ, ಬೇಕರಿ ಅನ್ವರ್ ಸಾಬ್, ರಿಯಾಜ್ ಅಹಮ್ಮದ್, ಎಂ.ಆರ್.ಸಿದ್ದೀಕ್, ಎಸ್.ಕೆ.ರಹಮತ್ ಉಲ್ಲಾ, ಕಲೀಮುಲ್ಲಾ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.
ಜಂಟಿ ಕಾರ್ಯದರ್ಶಿ ವಿ.ಪಿ. ಶಫೀಸಾಬ್ ಸ್ವಾಗತಿಸಿದರು. ಕಾರ್ಯದರ್ಶಿ ನಜೀರ್ ಅಹಮದ್ ಕೊನೆಯಲ್ಲಿ ವಂದಿಸಿದರು.