ನಾಳೆ ದಾಮ್‌ಕೋಸ್‌ ರಜತ ಮಹೋತ್ಸವ

ದಾವಣಗೆರೆ, ಸೆ.16- ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ (ದಾಮ್‌ಕೋಸ್‌) ರಜತ ಮಹೋತ್ಸವ ಸಮಾರಂಭವು ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಾಡಿದ್ದು ದಿನಾಂಕ 18ರಿಂದ 20ರ ವರೆಗೆ ನಡೆಯಲಿದೆ ಎಂದು ದಾಮ್‌ಕೋಸ್‌ ಅಧ್ಯಕ್ಷ ಬಿ.ಕೆ. ಶಿವಕುಮಾರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯು ಸಾಕಷ್ಟು ಎಳು-ಬೀಳುಗಳನ್ನು ಎದುರಿಸಿದೆ. ಸಂಘದ ಸದಸ್ಯರು ಹಾಗೂ ನಿರ್ದೇಶಕರ ಶ್ರಮದಿಂದ ದಾಮಕೋಸ್‌ ಪ್ರಗತಿ ಕಾಣುತ್ತಾ ಇಂದು ರಜತ ಮಹೋತ್ಸವ ಆಚರಿಸಲು ಸಜ್ಜಾಗಿದೆ ಎಂದು ಹೇಳಿದರು.

ನಾಡಿದ್ದು ದಿನಾಂಕ 18ರ ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಸಭೆ ಹಾಗೂ ಕೃಷಿ ಯಂತ್ರ ಮೇಳ ಆಯೋಜಿಸಲಾಗಿದ್ದು, ಮೇಳವನ್ನು ಸಂಘದ ನಿರ್ದೇಶಕ ಹೆಚ್‌.ಜಿ. ಮರುಳಸಿದ್ದಪ್ಪ ಉದ್ಘಾಟಿಸಲಿದ್ದಾರೆ.

ದಿನಾಂಕ 19ರ ಬೆಳಗ್ಗೆ 11ಕ್ಕೆ ರಜತ ಮಹೋ ತ್ಸವ ಕಾರ್ಯಕ್ರಮ ನಡೆಯಲಿದ್ದು, ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು.ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸದಸ್ಯರಿಗೆ ಬೆಳ್ಳಿ ನಾಣ್ಯ ವಿತರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಸಹಕಾರಿ ಸಚಿವ ಕೆ.ಎನ್‌. ರಾಜಣ್ಣ, ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಶಾಸಕ ಕೆ.ಎಸ್‌. ಬಸವಂತಪ್ಪ, ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ, ಮಾಜಿ ಶಾಸಕ ಎಸ್‌.ಎ ರವೀಂದ್ರನಾಥ್‌, ಮಾಜಿ ಅಡಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ದಿನಾಂಕ 20ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೃಷಿ ವಿಜ್ಞಾನಿಗಳಿಂದ ಭವಿಷ್ಯದಲ್ಲಿ ಅಡಿಕೆ ಬೆಳೆ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಈ ವೇಳೆ ಸಂಘದ ಉಪಾಧ್ಯಕ್ಷ ಹೆಚ್‌.ಜಿ. ಮಲ್ಲಿಕಾರ್ಜುನ್‌, ನಿರ್ದೇಶಕರಾದ ಎ.ಜಿ. ರೇವಣಸಿದ್ದಪ್ಪ, ಬಿ. ಬಸವರಾಜಯ್ಯ, ಕೆ.ಜಿ. ಉಮೇಶ್‌, ಎಂ.ಆರ್‌. ಮಂಜುನಾಥಯ್ಯ, ಜಿ.ಸಿ. ವಾಮದೇವಪ್ಪ, ರೈತ ಮುಖಂಡ ಶಿವಕುಮಾರ್‌, ಲಿಂಗರಾಜ್‌ ಮತ್ತಿತರರಿದ್ದರು.

error: Content is protected !!