ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಆತಂಕ ಒಡ್ಡುವ ಪ್ರಯತ್ನಕ್ಕೆ ಖಂಡನೆ

ಒಕ್ಕೂಟ ಉಳಿಸಿ ಆಂದೋಲನದ ಪ್ರಮುಖರಾದ ಪ್ರೊ.ಜಿ.ಎಸ್. ಸಿದ್ಧರಾಮಯ್ಯ

ದಾವಣಗೆರೆ, ಸೆ. 13- ಸಂವಿಧಾನ ಉಳುವಿಗಾಗಿ ನಾಳೆ ದಿನಾಂಕ 14 ರ ಶನಿವಾರ ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ಯುವಿಸಿಇ ಅಲ್ಯೂಮ್ನಿ ಹಾಲ್‌ನಲ್ಲಿ `ಸಂಚಲನಾ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟ ಉಳಿಸಿ ಆಂದೋಲನದ ಪ್ರಮುಖರಾದ ಪ್ರೊ.ಜಿ.ಎಸ್. ಸಿದ್ಧರಾಮಯ್ಯ  ಅವರು ನಿನ್ನೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯಗಳ ಅಸ್ಮಿತೆ, ಹಕ್ಕು, ಪಾಲಿನ ರಕ್ಷಣೆ, ಪ್ರಜಾಸತ್ತೆ, ಸಂವಿಧಾನ ಉಳಿವಿಗಾಗಿ ರಾಷ್ಟ್ರೀಯ ಅಭಿಯಾನ ನಡೆಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮಾವೇಶ, ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

14 ರಂದು ಬೆಂಗಳೂರಿನಲ್ಲಿ ನಡೆಯುವ ಸಂಚಲನಾ ಸಮಾವೇಶದ ಅಧ್ಯಕ್ಷತೆಯನ್ನು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡರು ವಹಿಸುವರು. ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಖ್ಯಾತ ಚಿಂತಕರೂ, ಸಾಹಿತಿಗಳಾದ ದೇವನೂರು ಮಹದೇವ, ಪ್ರೊ. ರವಿವರ್ಮಕುಮಾರ್, ಜಿ. ರಾಮಕೃಷ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಕಳೆದ ಹತ್ತು ವರ್ಷಗಳಿಂದ ಬಹುತ್ವ ಭಾರತದ ಅಸ್ಮಿತೆಗಳಾಗಿರುವ ಭಾಷೆ, ಸಂಸ್ಕೃತಿ, ಧರ್ಮ ವಿನಾಶ ಮಾಡುವ ಕೆಲಸಗಳು ನಡೆಯುತ್ತಿವೆ. ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಆತಂಕ ಒಡ್ಡುವ ಪ್ರಯತ್ನಗಳು ನಡೆದಿದ್ದರೂ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಬಲವಾಗಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಗಣತಂತ್ರ ವ್ಯವಸ್ಥೆಗೆ ಧಕ್ಕೆ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರಜಾಸತ್ತೆ, ಸಂವಿಧಾನ ಉಳಿವಿಗಾಗಿ ರಾಷ್ಟ್ರೀಯ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸುಳ್ಳನ್ನೇ ಪದೇ ಪದೇ ಹೇಳುವ ಮೂಲಕ ಸತ್ಯ ಎಂದು ಹೇಳುವ ಪ್ರಯತ್ನ ನಡೆಸಲಾಗುತ್ತಿದೆ. ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ಏಕಾತ್ಮಕತೆಯ ದೃಷ್ಟಿ ಹೊಂದಿರುವ ಕೇಂದ್ರ ಸರ್ಕಾರ ಬಹುತ್ವ ಭಾರತ ನಾಶ ಮಾಡುವ, ಸಂವಿಧಾನದ ಆಶಯಗಳನ್ನೇ ಹಿಸುಕಿ ಹಾಕುವ ಯತ್ನದಲ್ಲಿದೆ. ರಾಜ್ಯದಲ್ಲಿ ವಿವಿಧ ಪಕ್ಷಗಳು ಅಧಿಕಾರ ನಡೆಸುವ ಸಂದರ್ಭದಲ್ಲಿ ರಾಜ್ಯಪಾಲರ ಮೇಲೆ ಒತ್ತಡ ಹೇರಿ ರಾಜ್ಯಪಾಲರ ಕಚೇರಿಯನ್ನೇ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಜನಬೆಂಬಲ ಹೊಂದಿರುವ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವನ್ನೇ ಕಿತ್ತು ಹಾಕುವ ಕುತಂತ್ರ ನಡೆಸುತ್ತಿದೆ ಎಂಬುದಕ್ಕೆ ದೆಹಲಿ ಹಾಗೂ ಇತ್ತೀಚಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ ಎಂದರು.

ಒಕ್ಕೂಟ ಉಳಿಸಿ ಆಂದೋಲನದ ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹನಗವಾಡಿ, ಎಂ.ಟಿ. ಸುಭಾಶ್ಚಂದ್ರ, ಪ್ರೊ.ಎ.ಬಿ. ರಾಮಚಂದ್ರಪ್ಪ, ಬಿ. ವೀರಣ್ಣ, ನಿರಂಜನ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!