ಹೊನ್ನಾಳಿ, ಸೆ.8- ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕು ಬಿಜೆಪಿಯಿಂದ ನಾಳೆ ದಿನಾಂಕ 9 ರ ಸೋಮವಾರ ರಾಜ್ಯ ಕಾಂಗ್ರೇಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಮಳೆಯಿಂದ ಹಾನಿಯಾದ ಜಮೀನುಗಳ ರೈತರಿಗೆ ಪರಿಹಾರ ನೀಡುವಂತೆ, ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಜೋಡಣೆ ನೀತಿ ಖಂಡಿಸಿ, ತಾಲ್ಲೂಕಿನಲ್ಲಿ ಸುರಿದ ಮಳೆಗೆ ಬಿದ್ದ ಮನೆಗಳಿಗೆ ಬಿಜೆಪಿ ಸರ್ಕಾರದಂತೆ ಪರಿಹಾರ ಮುಂದುವರೆಸುವಂತೆ, ಸ್ಟ್ಯಾಂಪ್ ಡ್ಯೂಟಿ ದರ ಹೆಚ್ಚಳದಿಂದ ರೈತರು ಮತ್ತು ಜನಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆ ಇನ್ನಿತರೆ ಕಾಂಗ್ರೇಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಹೋರಾಟ ನಡೆಸಲಾಗುವುದೆಂದರು.
ಪಕ್ಷದ ಮುಖಂಡ ಜೆ.ಕೆ. ಸುರೇಶ್ ಮಾತನಾಡಿ, ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು. ಗೋಷ್ಟಿಯಲ್ಲಿ ಮಾರುತಿನಾಯ್ಕ, ಅರಕೆರೆ ನಾಗರಾಜ, ಶಿವಾನಂದ, ಸುರೇಂದ್ರನಾಯ್ಕ ಇನ್ನಿತರರಿದ್ದರು.