ಹೆಚ್ಚಿಸಿರುವ ಶುಲ್ಕ ಹಿಂತೆಗೆಯುವಂತೆ ಆಗ್ರಹ

ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೇ.50 ರಷ್ಟು ಸೀಟುಗಳನ್ನು ಹೆಚ್ಚಿನ ಶುಲ್ಕದ ಸೀಟುಗಳಾಗಿ ಮೀಸಲಿಟ್ಟಿರುವ ಕ್ರಮಕ್ಕೆ  ಎಐಡಿಎಸ್ಓ ಖಂಡನೆ

ದಾವಣಗೆರೆ, ಸೆ. 9-  ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೇ.50 ರಷ್ಟು ಸೀಟುಗಳನ್ನು ಹೆಚ್ಚಿನ ಶುಲ್ಕದ ಸೀಟುಗಳಾಗಿ ಮೀಸಲಿಟ್ಟಿರುವುದನ್ನು ಎಐಡಿಎಸ್ಓ ಜಿಲ್ಲಾ ಸಮಿತಿ  ತೀವ್ರವಾಗಿ ಖಂಡಿಸಿದೆ. ವಿದ್ಯಾರ್ಥಿ ವಿರೋಧಿ ನಡೆಯು, ಮುಂಬರುವ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಲ್ಲಿ ಆತಂಕ ಉಂಟು ಮಾಡಿದೆ. ಈಗಾಗಲೇ ಗಗನಕ್ಕೇರಿರುವ 42,866 ರೂ.ಶುಲ್ಕದ ಭಾರದಲ್ಲಿ ಹಾಗೂ ಒತ್ತಡದಲ್ಲಿ ನಲುಗುತ್ತಿರುವ ಬಡ ವಿದ್ಯಾರ್ಥಿಗಳ ಮೇಲೆ 97,495 ರೂ. ಶುಲ್ಕವು ಸಿಡಿಲಿನಂತೆ ಎರಗಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಟಿ.ಎಸ್. ಸುಮನ್ ಹೇಳಿದ್ದಾರೆ. 

ಕೆಇಎ ಹೈಯರ್ ಗೌರನ್ಮೆಂಟ್ ಫೀ ಹೆಸರಲ್ಲಿ ಈ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಇನ್ನು ಮುಂದೆ, ‘ಸರ್ಕಾರಿ ಕಾಲೇಜಿನಲ್ಲಿ ಹೆಚ್ಚಿಗೆ ದುಡ್ಡು ಕೊಟ್ಟವನಿಗೇ ಸೀಟು!’ ಎಂಬ ವ್ಯಾಪಾರೀಕರಣಕ್ಕೆ ಇದು ರಹದಾರಿಯಾಗಿದೆ.

ಈಗಾಗಲೇ ರಾಜ್ಯದಾದ್ಯಂತ ಪ್ರತಿ ವರ್ಷ ಹೆಚ್ಚುತ್ತಿರುವ ಶುಲ್ಕದ ನಡುವೆ ಸರ್ಕಾರಿ ಇಂಜಿನಿ ಯರಿಂಗ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಶುಲ್ಕ ವನ್ನು ಪ್ರಾರಂಭಿಸಿರುವುದು ಸಾರ್ವಜನಿಕ ಶಿಕ್ಷ ಣದ ಮೇಲೆ ಮಾಡಿರುವ ದೊಡ್ಡ ದಾಳಿಯಾಗಿದೆ.  

ಈಗಾಗಲೇ ಉನ್ನತ ಶಿಕ್ಷಣದಿಂದ ದೂರವಾಗುತ್ತಿರುವ ಬಡ ರೈತ ಕಾರ್ಮಿಕರ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಈ ಹೆಚ್ಚಿನ ಶುಲ್ಕವು ಬಡ ಹಾಗು ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ಇನ್ನಷ್ಟು ದೂರ ತಳ್ಳುತ್ತದೆ. ಖಾಸಗೀ ಸಂಸ್ಥೆಯಂತೆ ಹೆಚ್ಚಿನ ಶುಲ್ಕಕ್ಕೆ ಅರ್ಧ ದಷ್ಟು ಸೀಟುಗಳನ್ನು ಮಾರಾಟಕಿಟ್ಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರವು ಕೂಡಲೇ ಗಮನಹರಿಸಿ ದುಬಾರಿ ಶುಲ್ಕವನ್ನು ಹಿಂತೆಗೆದುಕೊಳ್ಳಬೇಕೆಂದು ಎಐಡಿಎಸ್ಓ ಜಿಲ್ಲಾಧ್ಯಕ್ಷ ಸುಮನ್ ಟಿ.ಎಸ್. ಆಗ್ರಹಿಸಿದ್ದಾರೆ. 

error: Content is protected !!