ಬಾಲ್ಯ ವಿವಾಹ ಅಪರಾಧ, ಗಂಡಿಗೆ 21, ಹೆಣ್ಣಿಗೆ 18 ವರ್ಷ ನಂತರವೇ ಮದುವೆ

ದಾವಣಗೆರೆ, ಸೆ.5- ಬಾಲ್ಯವಿವಾಹ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಬಾಲ್ಯವಿವಾಹವು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ತಿದ್ದುಪಡಿ ಪ್ರಕಾರ 18 ವರ್ಷದೊಳಗಿನ ಯಾವುದೇ ಹೆಣ್ಣು ಮಗುವಿಗೆ ಹಾಗೂ 21 ವರ್ಷದೊ ಳಗಿನ ಯಾವುದೇ ಗಂಡು ಮಗುವಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯವಿವಾಹವೆಂದು ಪರಿಗಣಿಸಲಾಗಿರುತ್ತದೆ.

ಬಾಲ್ಯವಿವಾಹ ನಡೆದಲ್ಲಿ ಕೇವಲ ವಿವಾಹವಾಗುವ ವಯಸ್ಕನಿಗೆ ಹಾಗೂ ಬಾಲಕಿಯ ತಂದೆ, ತಾಯಿ ಹಾಗೂ ಸಂಬಂಧಿಕರು, ಬಾಲ್ಯವಿವಾಹಕ್ಕೆ ಉತ್ತೇಜನ ನೀಡಿದವರು, ತಡೆಯಲು ವಿಫಲರಾದವರು ಮತ್ತು ಭಾಗವಹಿಸಿದವರು ಎಲ್ಲರೂ ಅಪರಾಧಿಗಳೇ ಆಗುತ್ತಾರೆ. ತಪ್ಪಿತಸ್ಥರಿಗೆ 1 ವರ್ಷದಿಂದ ಗರಿಷ್ಠ-2 ವರ್ಷಗಳವರೆಗೆ ಕಾರಾಗೃಹ ಮತ್ತು 1 ಲಕ್ಷಗಳವರೆಗೆ ದಂಡ ಅಥವಾ ಎರಡನ್ನು ವಿಧಿಸಬಹುದು.

ಏಪ್ರಿಲ್-2024 ರಿಂದ ಆಗಸ್ಟ್-2024ರವರೆಗೆ ಜಿಲ್ಲೆಯಲ್ಲಿ ಒಟ್ಟು 35 ದಾಖಲಾದ ಬಾಲ್ಯವಿವಾಹ ಪ್ರಕರಣಗಳಲ್ಲಿ 32 ಬಾಲ್ಯವಿವಾಹಗಳನ್ನು ತಡೆಗಟ್ಟ ಲಾಗಿದೆ. ಅದರಲ್ಲಿ 3 ಬಾಲ್ಯವಿವಾಹಗಳು ನಡೆದಿದ್ದು, ತಪ್ಪಿತಸ್ಥರ ಮೇಲೆ ಎಫ್.ಐ.ಆರ್ ಪ್ರಕರಣಗಳು ದಾಖಲಿಸಲಾಗಿದೆ ಹಾಗೂ 2 ಪ್ರಕರಣಗಳಲ್ಲಿ ನ್ಯಾಯಾಲಯದ ಮುಖಾಂತರ ತಡೆಯಾಜ್ಞೆ ಆದೇಶದ ಮೂಲಕ ಬಾಲ್ಯವಿವಾಹ ತಡೆಗಟ್ಟಲಾಗಿದೆ.

ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಾಲ್ಯವಿವಾಹದಿಂದಾಗುವ ದುಷ್ಟರಿಣಾಮದ ಕುರಿತು ಜಿಲ್ಲಾಮಟ್ಟ ಮತ್ತು ತಾಲ್ಲೂಕು ಮಟ್ಟದಲ್ಲಿ ಅರಿವು ಕಾರ್ಯಕ್ರಮ ಹಾಗೂ ಶಾಲಾ ಮತ್ತು ಕಾಲೇಜುಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ. 

ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಕರ್ತವ್ಯವಾಗಿರುತ್ತದೆ. ಬಾಲ್ಯವಿವಾಹ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ-1098, 112 ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂ.08192-222701ಗೆ ಗಮನಕ್ಕೆ ತರಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಗಂಗಾಧರಸ್ವಾಮಿ ತಿಳಿಸಿದ್ದಾರೆ.

error: Content is protected !!