ದಾವಣಗೆರೆ, ಆ.29 – ಚನ್ನಗಿರಿ ಪುರಸಭೆ ಅಧ್ಯಕ್ಷರ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ ದೊರೆತಿದ್ದು, ಕೂಡಲೇ ಚುನಾವಣೆ ನಡೆಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪುರಸಭೆ ಸದಸ್ಯರು ಹಾಗೂ ದಲಿತ ಮುಖಂಡರು ಆರೋಪಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಸಮಾಜದ ಮುಖಂಡ ನಲ್ಲೂರು ಶಿವಪ್ಪ, ಜಿಲ್ಲಾದ್ಯಂತ ಎಲ್ಲಾ ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯ್ತಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದರೂ ಚನ್ನಗಿರಿ ತಾಲ್ಲೂಕಿನಲ್ಲಿ ಮಾತ್ರ ಚುನಾವಣೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಪುರಸಭೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಮಹಿಳೆಗೆ ಮೀಸಲಾಗಿರುವುದರಿಂದ ಮೀಸಲಾತಿ ಬದಲಿಸುವ ಹುನ್ನಾರವೂ ನಡೆಯುತ್ತಿದೆ. ಒಂದು ವೇಳೆ ಮೀಸಲಾತಿ ಬದಲಾವಣೆ ಆದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ನರಸಿಂಹಮೂರ್ತಿ, ಉಚ್ಚಂಗಿ ಪ್ರಸಾದ್, ಕಮಲ ಹರೀಶ್, ನಾಗರಾಜ್ ಪಟ್ಲಿ, ಪರಮೇಶ್ ಪಾರಿ, ಚಿಕ್ಕಣ್ಣ, ಅಣ್ಣಯ್ಯ ಸಿ.ಆರ್., ಗೋವಿಂದಪ್ಪ, ಶ್ರೀನಿವಾಸ್, ರುದ್ರಪ್ಪ, ವೀರೇಶ್, ರಘು ಸಂತೇಬೆನ್ನೂರು ಇತರರು ಉಪಸ್ಥಿತರಿದ್ದರು.