ಶಾಸಕರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಂದಲೇ ಮುಸ್ಲಿಂ ಸಮಾಜಕ್ಕೆ ಅನ್ಯಾಯ

ಹರಪನಹಳ್ಳಿ, ಆ.23- ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆ ಮುಸ್ಲಿಮರ ಕೈ ತಪ್ಪಲು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಅವರೇ ನೇರ ಹೊಣೆ ಆಗಿದ್ದಾರೆ ಎಂದು ಮುಸ್ಲಿಂ ಸಮಾಜದ ಮುಖಂಡರು ಆರೋಪಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೂಡಲೇ ಅಂಜಿನಪ್ಪ ಅವರು ರಾಜೀನಾಮೆ ನೀಡಬೇಕೆಂದು ತಾಲ್ಲೂಕಿನ ಮುಸ್ಲಿಂ ಸಮಾಜವು ಒತ್ತಾಯಿಸಿದೆ. 

ಒಟ್ಟು 27 ಸದಸ್ಯರ ಬಲವಿರುವ ಪುರಸಭೆಯಲ್ಲಿ 14 ಕಾಂಗ್ರೆಸ್‌, 10 ಬಿಜೆಪಿ, 2 ಪಕ್ಷೇತರ ಮತ್ತು 1 ಜೆಡಿಎಸ್‌ ಸದಸ್ಯರಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಸಂಪೂರ್ಣ ಬೆಂಬಲವಿದ್ದರೂ 2 ಬಾರಿ ಅಧಿಕಾರ ಕಳೆದುಕೊಂಡಿತ್ತು. 28 ಸಾವಿರ ಮುಸ್ಲಿಂ ಮತಗಳನ್ನು ಹೊಂದಿರುವ ಈ ತಾಲ್ಲೂಕು, ಈವರೆಗೂ ಮುಸ್ಲಿಂ ಸಮಾಜಕ್ಕೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ನೀಡಿಲ್ಲ ಎಂದು ದೂರಿದ್ದಾರೆ.

ಸ್ವತಃ ಕಾಂಗ್ರೆಸ್ ಪಕ್ಷದವರೇ ಮುಸ್ಲಿಂ ಜನಾಂಗಕ್ಕೆ ಪುರಸಭೆಯ ಅಧ್ಯಕ್ಷ ಸ್ಥಾನ ಸಿಗಬಾರದೆಂಬ ಷಡ್ಯಂತ್ರ ಮಾಡಿರುವುದು ಸರಿಯಲ್ಲ ಎಂದಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರವು ಮುಸ್ಲಿಮರಿಗೆ ಮಾಡಿದ ಅನ್ಯಾಯವನ್ನು ಮನದಲ್ಲಿ ಇಟ್ಟುಕೊಂಡು ಶೇ.100ರಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಾ ಬಂದಿದ್ದೇವೆ. ಆದರೂ ಈ ತಾಲ್ಲೂಕಿನಲ್ಲಿ ಈ ಸಮಾಜಕ್ಕೆ ಬಾರಿ ಅನ್ಯಾಯವಾಗಿದೆ ಎಂದಿದ್ದಾರೆ.

ಮುಸ್ಲಿಂ ಸಮಾಜದ ಅಭ್ಯರ್ಥಿಯೊಬ್ಬರು ಪುರಸಭೆಯ ಅಧ್ಯಕ್ಷರಾಗುವುದನ್ನು ಸಹಿಸದ ಕಾಂಗ್ರೆಸ್ ಪಕ್ಷದವರೇ ಈ ರೀತಿ ಮಾಡಿರುವುದು ದುರದೃಷ್ಟಕರ ಸಂಗತಿ ಎಂದು ಅವರು ಹೇಳಿದರು. 

ತಾಲ್ಲೂಕಿನಲ್ಲಿ ಮುಸ್ಲಿಂ ಸಮಾಜವನ್ನು ರಾಜಕೀಯ ವಾಗಿ ಹತ್ತಿಕ್ಕುವ ಪ್ರಯತ್ನ ನಡೆದಿದ್ದು, ಈ ರೀತಿಯ ಮನಸ್ಥಿತಿ ಪಕ್ಷದಲ್ಲಿ ಮುಂದುವರೆದಿದ್ದೇ ಆದಲ್ಲಿ ಬರುವ ಚುನಾವಣೆಗಳಲ್ಲಿ ಮುಸ್ಲಿಂ
ಸಮಾಜ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ ಎಂಬ ಎಚ್ಚರಿಕೆಯನ್ನು ಮುಸ್ಲಿಂ ಸಮಾಜದ ಮುಖಂಡರಾದ ಪುರಸಭೆ ಮಾಜಿ ಸದಸ್ಯ ಡಿ. ಜಾವೂರ್, ಗ್ರಾ.ಪಂ.  ಮಾಜಿ ಸದಸ್ಯ ಮಾಬುಸಾಬ್ ಸಾಗೋಲಿ, ದಾದಾಪೀರ್, ಕೆ. ಜಹಾಂಗೀರ್, ಪಿ. ಯುಸೂಫ್, ಸೇರಿದಂತೆ ಇತರರು     ತಿಳಿಸಿದ್ದಾರೆ.

error: Content is protected !!