ಕೋಮುವಾದ ನಿಲ್ಲಲಿ

ಮರೆಯಲಾಗದ ಮಹನೀಯರು ಗೋಷ್ಠಿಯಲ್ಲಿ ಸಾಹಿತಿ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ

ಹಾವೇರಿ, (ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ), ಜ. 10- ಇಂದು ಕೋಮುವಾದ ಎಲ್ಲೆಡೆ ವ್ಯಾಪಕವಾಗಿ ಹರಡಿದೆ. ಇದನ್ನು ಇಲ್ಲಿಗೆ ನಿಲ್ಲಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಹೆಚ್.ಎ. ಭಿಕ್ಷಾವರ್ತಿಮಠ ಕರೆ ನೀಡಿದ್ದಾರೆ.

ಶನಿವಾರ ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ಜರುಗಿದ `ಮರೆಯಲಾಗದ ಮಹನೀಯರು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರೇಮವಾದಿಗಳು, ಮಾನವತಾವಾದಿಗಳು ಕನ್ನಡಕ್ಕೆ ದೀಪವಾಗಿ ಮರೆಯಲಾಗದ ಮಹನೀಯರಾದರು. ಕನ್ನಡಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಎಂದೂ ಮಾಡಲಿಲ್ಲ. ಆದರೆ, ಇಂದು ಕೋಮುವಾದ ಎಲ್ಲೆಡೆ ವ್ಯಾಪಕವಾಗಿ ಹರಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಡಿನಲ್ಲಿ ಅನೇಕ ಮಹಾನ್ ಪುರುಷರು ಜನಿಸಿ, ತಮ್ಮ ಜೀವನವನ್ನು ಶ್ರೀಗಂಧದಂತೆ ತೇಯ್ದು ದುಡಿದು ಮಡಿದಿದ್ದಾರೆ. ಅವರಲ್ಲಿ ಪೂಜ್ಯ ಹಾನಗಲ್ ಕುಮಾರ ಶಿವಯೋಗಿ ಗಳು, ಕಾದಂಬರಿ ಪಿತಾಮಹ ಗಳಗನಾಥರು, ಡಾ.ವಿ.ಕೃ.ಗೋಕಾಕ್, ಡಾ.ಚನ್ನವೀರ ಕಣವಿ, ಪಂ.ಪುಟ್ಟರಾಜ ಗವಾಯಿಗಳು ಮತ್ತು ಪಂಚಾಕ್ಷರಿ ಗವಾಯಿಗಳು ಮೇರು ಸಾಲಿನಲ್ಲಿ ನಿಂತವರು ಎಂದರು.

ಜಗತ್ತಿನಲ್ಲಿರುವ ಆರು ಸಾವಿರ ಭಾಷೆಗಳಲ್ಲಿ 22 ಪ್ರಾಚೀನ ಭಾಷೆಗಳು, ಮೂರು ಭಾಷೆ ಸರ್ವಾಂಗೀಣ ಸುಂದರ ಭಾಷೆಗಳಾಗಿದ್ದು, ಇದರಲ್ಲಿ ಕನ್ನಡವು ಒಂದಾಗಿದೆ ಎಂಬುದು ಹೆಮ್ಮೆಯ ವಿಷಯ. ಅಲ್ಲಮ ಪ್ರಭುವಿನಿಂದ ಸಿದ್ದೇಶ್ವರ ಶ್ರೀಗಳವರೆಗೆ, ಕನಕದಾಸರಿಂದ ಕುವೆಂಪುರವರೆಗೆ, ಅಧ್ಯಾತ್ಮಿಕ ತಂಗಾಳಿ ಉಣಬಡಿಸಿದ್ದಾರೆ ಎಂದು ತಿಳಿಸಿದರು.

ಗದುಗಿನ ಗವಾಯಿಗಳು ನಾಡಿನ ಸಂಗೀತ ಲೋಕಕ್ಕೆ ಅಪರಿಮಿತ ಕೊಡುಗೆ ನೀಡಿದ್ದಾರೆ. ಮುಂಬೈನಲ್ಲಿರುವ ಕಂಪೆನಿಯೊಂದು ಹಿಂದಿ-ಮರಾಠಿಯಲ್ಲಿ ಹಾಡಲು ತಿಳಿಸಿದಾಗ ಅದನ್ನು ತಳ್ಳಿಹಾಕಿ ಕನ್ನಡದಲ್ಲೇ ಹಾಡುತ್ತೇನೆ ಎಂದು ದೃಢ ನಿರ್ಧಾರ ಮಾಡಿದ್ದರು. ಅಂಧರ ಬಾಳಿನ ಆಶಾಕಿರಣ. ಅಸಂಖ್ಯಾತ ಅಂಧರಿಗೆ ದಾರಿದೀಪವಾಗಿ ತಮ್ಮ ಜೀವನ ಮುಡುಪಾಗಿಟ್ಟವರು ಇವರು ಎಂದರು.

ವಚನ ಸಾಹಿತ್ಯ ಸಂರಕ್ಷಕ ಹಾನಗಲ್‌ ಶ್ರೀ ಕುಮಾರ ಶಿವಯೋಗಿಗಳ ಕುರಿತು ಹಾವೇರಿ ಹುಕ್ಕೇರಿ ಮಠದ ಸದಾಶಿವಸ್ವಾಮೀಜಿ ಮಾತನಾಡಿ, ಸಮಾಜದ ನೆಲೆಗಟ್ಟಿನಲ್ಲಿ ನಿಲ್ಲುವ ಶ್ರೇಷ್ಠ ಪುರುಷ ಹಾನಗಲ್ ಕುಮಾರ ಶಿವಯೋಗಿಗಳು, ಕನ್ನಡಕ್ಕೆ ವಿಶೇಷವಾದ ಕೊಡುಗೆ ನೀಡಿದ ಪುಣ್ಯಪುರುಷ ಇವರು ಎಂದರು.

ಗೋಷ್ಠಿಯಲ್ಲಿ ಶ್ರೀಧರ ಹೆಗಡೆ ಭದ್ರನ್, ಡಾ.ರಾಜಶೇಖರ ದಾನರಡ್ಡಿ ಡಾ.ಪ್ರಶಾಂತ ನಾಯಕ, ಶರಣಬಸಪ್ಪ ಸೇರಿದಂತೆ ಪ್ರಮುಖರಿದ್ದರು.

error: Content is protected !!