ದಾವಣಗೆರೆ, ಆ. 20 – ಹಿರಿಯ ಕಾರ್ಮಿಕ ನಾಯಕರೂ, ಸಿಪಿಐ ಮತ್ತು ಎಐಟಿಯುಸಿ ಜಿಲ್ಲಾ ಸಮಿತಿ ಖಜಾಂಚಿಯೂ ಆಗಿದ್ದ ಕಾಂ. ಆನಂದರಾಜ್ ಅವರ ನಿಧನಕ್ಕೆ ಸಿಪಿಐ ಮತ್ತು ಎಐಟಿಯುಸಿ ಜಿಲ್ಲಾ ಸಮಿತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ನಗರದ ಕಾಂ. ಪಂಪಾಪತಿ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣಕುಮಾರ್, ಜೀವನದುದ್ದಕ್ಕೂ ಸಿದ್ಧಾಂತದಿಂದ ವಿಮುಖರಾಗದೆ ಕಮ್ಯುನಿಸ್ಟ್ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದ ಆನಂದರಾಜ್ ಅವರ ಅಕಾಲಿಕ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ನೇರ ಮತ್ತು ನಿಷ್ಠೂರ ವ್ಯಕ್ತಿತ್ವ ಎಲ್ಲರಿಗೂ ಮೆಚ್ಚು ಗೆಯಾ ಗಿತ್ತು. ಅವರ ಬದುಕಿನ ಆದರ್ಶಗಳು ಎಲ್ಲಾ ಕಾರ್ಯ ಕರ್ತರಿಗೂ ಮಾರ್ಗದರ್ಶನವಾಗಲಿ ಎಂದು ಅಭಿಪ್ರಾಯಪಟ್ಟರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಮಾತನಾಡಿ, ಆನಂದ ರಾಜ್ ಅವರು ಅವರ ಬದುಕಿನುದ್ದಕ್ಕೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಡೆದು ಕೊಂಡವರು. ಅವರ ಅಗಲಿಕೆ ನಮಗೆ ಅಭದ್ರತೆ ತಂದಿದೆ. ಅವರು ಬದುಕಿದ ರೀತಿ ನಮಗೆ ಮಾರ್ಗದರ್ಶನವಾಗಲಿ ಎಂದರು.
ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಪಿ. ಷಣ್ಮುಖ ಸ್ವಾಮಿ, ಟಿ.ಎಸ್. ನಾಗರಾಜ್, ಸತೀಶ್, ಹೆಗ್ಗೆರೆ ರಂಗಪ್ಪ, ಆವರಗೆರೆ ವಾಸು, ವಿ. ಲಕ್ಷ್ಮಣ, ಐರಣಿ ಚಂದ್ರು, ಯಲ್ಲಪ್ಪ, ಜಯಪ್ಪ, ಕೆ. ಬಾನಪ್ಪ, ಡಿ. ಶಿವಕುಮಾರ್ ಶೆಟ್ಟರ್, ನಿಟುವಳ್ಳಿ ಬಸವರಾಜ್, ಕೆಎಸ್‌ಆರ್‌ಟಿಸಿ ಹನುಮಂತಪ್ಪ, ಮೊಹಮ್ಮದ್ ರಫೀಕ್, ಸಿದ್ದೇಶ್, ಪರಶುರಾಮ್, ಚಿನ್ನಪ್ಪ, ಸಿ. ರಮೇಶ್, ಹೆಚ್. ಜಿ. ಉಮೇಶ್, ಎಂ.ಬಿ. ಶಾರದಮ್ಮ ಸೇರಿದಂತೆ ಎಲ್ಲರೂ ಮೃತರಿಗೆ ಸಂತಾಪ ಸೂಚಿಸಿ, ಮಾತನಾಡಿದರು.