ಮಲೇಬೆನ್ನೂರು, ಆ.6- ಕಡರನಾಯಕಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹರಿಹರದ ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನದ ವತಿಯಿಂದ `ಹಸಿರೇ ಉಸಿರು’ ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು.
ಶಾಲಾ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷಿಣಿ ಯಾದ ಶ್ರೀಮತಿ ಸವಿತಾ ರವಿಕುಮಾರ್, ಗ್ರಾ.ಪಂ.ಸದಸ್ಯ ಲೋಕಪ್ಪ ಅವರು ಗಿಡ ನೆಡುವ ಮೂಲಕ `ಹಸಿರೇ ಉಸಿರು’ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಶ್ರೀಮತಿ ಕೆ.ಸಿ.ಶಾಂತಕುಮಾರಿ ಅವರು, ಪ್ರತಿಷ್ಠಾನದ ಮಹಾ ಪೋಷಕರಾದ ಶ್ರೀ ಅವಧೂತ ಕವಿಗುರುರಾಜ ಗುರೂಜಿ ಅವರ ಸಂಕಲ್ಪದಂತೆ ಜೀವಿಸುವಂತ ಪ್ರಾಣಿ, ಪಕ್ಷಿ, ಜಲ – ಚರ ಮತ್ತು ಮನು ಕುಲಕ್ಕೂ ಈ ಪರಿಸರದ ನಂಟು ಇಲ್ಲದೆ ಇದ್ದರೆ ಬದುಕಲು ಸಾಧ್ಯವಿಲ್ಲ, ಎನ್ನುವ ದೂರ ದೃಷ್ಠಿಯಿಂದ ಮಳೆಗಾಲದ ಅವಧಿಯಲ್ಲಿ ಇಂಥ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬಹಳಷ್ಟು ಕಾಡು ನಶಿಸಿ ಹೋಗುತ್ತಿದ್ದು, ಇತ್ತೀಚಿಗೆ ಉಸಿರಾಟದ ತೊಂದರೆಗೆ ಬಹಳಷ್ಟು ಜನ ಕಂಗಾಲಾಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಕಾಡು ಸಂರಕ್ಷಣೆ ಬಗ್ಗೆ ಅರಿವನ್ನು ಮೂಡಿಸುವ ಕೆಲಸ ಆಗಬೇಕಿದೆ. ಇದಕ್ಕೆ ಸರ್ಕಾರ ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ ಎನ್ನುತ್ತಾ `ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಶಾಲಾ ಆವರಣದಲ್ಲಿ ನೆಟ್ಟಂತ ಸಸಿಗಳ ಸಂರಕ್ಷಣೆಯನ್ನು ವಿದ್ಯಾರ್ಥಿಗಳು ಕಾಪಾಡುವ ಮೂಲಕ ಪರಿಸರ ಉಳಿಸುವಲ್ಲಿ ಅವರ ಮುಂದಿನ ಭವಿಷ್ಯಕ್ಕೆ ನಾಂದಿ ಆಗಲಿ ಎಂದು ಶಾಂತಕುಮಾರಿ ಹೇಳಿದರು.
ಶಾಲೆಯ ಮುಖ್ಯೋಪದ್ಯಾಯರಾದ ಮಂಜಪ್ಪ, ಸಹ ಶಿಕ್ಷಕರಾದ ಕುಬೇರಪ್ಪ, ಆರೋಗ್ಯ ಇಲಾಖೆಯ ಸಂತೋಷ್ ಕುಮಾರ್, ಚೇತನ, ಪ್ರತಿಷ್ಠಾನದ ಸಂಪರ್ಕ ಅಧಿಕಾರಿ ಶ್ರೀಮತಿ, ಸುನೀತಾ ಧನರಾಜ್, ಎಸ್‌ಡಿಎಂಸಿ ಸದಸ್ಯರಾದ ಧನರಾಜ್, ಭರತ್, ನಾಗರಾಜ್, ಅಂಬುಜಮ್ಮ, ನಾಗರತ್ನಮ್ಮ, ಮಮತಾ , ಹನುಮಂತ ಹಾಗೂ ಇತರರು ಪಾಲ್ಗೊಂಡಿದ್ದರು.