ಬಾಕಿ ವೇತನಕ್ಕಾಗಿ ಕಾರ್ಮಿಕರ ಒತ್ತಾಯ

ಕಾರ್ಮಿಕರ ಫೆಡರೇಷನ್‌ ವತಿಯಿಂದ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ

ದಾವಣಗೆರೆ, ಆ.5- ಜಿಲ್ಲೆಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ಕಾರ್ಮಿಕರ 5 ತಿಂಗಳ ಬಾಕಿ ವೇತನವನ್ನು ಕೂಡಲೇ ನೀಡಬೇಕೆಂದು ಆಗ್ರಹಿಸಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಮಿಕರ ಫೆಡರೇಷನ್ ಇಲಾಖೆಯ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.

ಈ ವೇಳೆ ಕಾರ್ಮಿಕ ಮುಖಂಡರು ಮಾತನಾಡಿ, ಬಿ.ಕೆ.ಆರ್‌. ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ ಹೊರಗುತ್ತಿಗೆ ಏಜೆನ್ಸಿ ಮೂಲಕ 25ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕಳೆದ 5 ತಿಂಗಳಿಂದ ವೇತನ  ನೀಡದೇ ಇರುವುದರಿಂದ ಕುಟುಂಬದ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿದರು.

ಈ ಹಿಂದೆ ಭದ್ರತಾ ಸಿಬ್ಬಂದಿಗಳಿಗೆ ಕನಿಷ್ಠ 8 ಗಂಟೆಗಳ ಕಾಲ ಕೆಲಸ, ವೇತನ ಚೀಟಿ, ಇಪಿಎಫ್‌ ಸೌಲಭ್ಯ ಕಲ್ಪಿಸುವಂತೆ, ಸಾಕಷ್ಟು ಸಲ ಮನವಿ ಮಾಡಿದ್ದರೂ ಸ್ಪಂದಿಸದ ಕಾರಣ ಪ್ರತಿಭಟನೆ ಅನಿವಾರ್ಯವಾಯಿತು ಎಂದರು.

ಕೆಲಸ ಮಾಡುವ ಕಾರ್ಮಿಕರಿಗೆ ಸಮವಸ್ತ್ರ, ಗುರುತಿನ ಚೀಟಿ, ಪ್ರತಿ ತಿಂಗಳು ವೇತನ ಚೀಟಿ ಮತ್ತು ಕೂಡಲೇ 4 ತಿಂಗಳ ವೇತನ ನೀಡಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ರಜೆ ದಿನಗಳಲ್ಲಿ ಕೆಲಸ ಮಾಡಿಸಿಕೊಂಡಿರುವುದಕ್ಕೆ ತುಟ್ಟಿಭತ್ಯೆ ರೂಪದಲ್ಲಿ ವೇತನ ನೀಡುವುದು ಸೇರಿ ನೇಮಕಾತಿ ದಿನದಿಂದ ಇಲ್ಲಿಯವರೆಗೆ ವೇತನ, ಇಪಿಎಫ್‌ ಮತ್ತು ಇಎಸ್‌ಐ ಹಣ ಪಾವತಿಸಿದ ಬಗ್ಗೆ ದಾಖಲೆ ನೀಡಬೇಕು ಎಂದು ಆಗ್ರಹಿಸಿದರು.

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್‌ ಕೈದಾಳೆ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್‌ ಕುಕ್ಕುವಾಡ,     ಜಿಲ್ಲಾ ಮುಖಂಡ ಅಣಬೇರು ತಿಪ್ಪೇಸ್ವಾಮಿ, ಕಾರ್ಮಿಕರಾದ ಗದಿಗೆಪ್ಪ, ಮುರುಗೇಶಿ, ನರಸಿಂಹ ಮೂರ್ತಿ, ಚನ್ನಬಸವರಾಜ, ಜಯ್ಯಮ್ಮ, ಅಂಜಿನಿ, ಸುಬ್ಬಣ್ಣ, ಬಲರಾಮ ಅರಸು, ನರಸಿಂಹಪ್ಪ, ಚನ್ನಪ್ಪ, ನವೀನ್‌, ಹರೀಶ್‌, ಮಾಂತೇಶ್‌ ಇನ್ನಿತರರಿದ್ದರು.

error: Content is protected !!