ದಾವಣಗೆರೆ, ಆ.2- 16 ವರ್ಷದ ಬಾಲಕಿಯನ್ನು ಪ್ರೀತಿಸು ಎಂದು ಪೀಡಿಸಿ, ಬೆದರಿಕೆ ಹಾಕಿದ್ದ ಆರೋಪಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-1 ನ್ಯಾಯಾಲಯವು 6 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ಆರೋಪಿ ನಿಟುವಳ್ಳಿಯ ಅಲ್ತಾಫ್, ನನ್ನ 16 ವರ್ಷದ ಮಗಳಿಗೆ ಪ್ರೀತಿ ಮಾಡುವಂತೆಯೂ ಇಲ್ಲದಿದ್ದರೆ ಆಸಿಡ್ ಹಾಕಿ ಮುಗಿಸುವುದಾಗಿ ಬೆದರಿಕೆ ಹಾಕುತ್ತಿದ್ದ, ಅಲ್ಲದೆ ಮಾನ ಹಾನಿ ಮಾಡಿದ್ದ ಎಂದು ಬಾಲಕಿ ತಂದೆ 2022ರ ಮಾರ್ಚ್ 23ರಂದು ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಆರೋಪ ಸಾಬೀತಾದ್ದರಿಂದ ಆಗಸ್ಟ್ 2ರಂದು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪಿರ್ಯಾದಿದಾರರ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ನ್ಯಾಯ ಮಂಡಿಸಿದ್ದರು.