ದಾವಣಗೆರೆ, ಜು. 5 – ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ವೃತ್ತಿ ರಂಗಭೂಮಿ ಕಲಾವಿದ ಕಂಚಿಕೆರೆ ನಟರಾಜ್ ಅವರು ಇಂದು ಸಂಜೆ 7 ಗಂಟೆಗೆ ನಿಧನರಾದರು.
ನಟರಾಜ್, ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾಗಿದ್ದ ದಿ. ಕಂಚಿಕೇರಿ ಶಿವಣ್ಣ ಅವರ ಪುತ್ರ. ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ನಾಳೆ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.
ಸಂತಾಪ : ನಟರಾಜ್ ಅವರನ್ನು ಕಳೆದುಕೊಂಡು ರಂಗಭೂಮಿ ಕ್ಷೇತ್ರ ನಿಜಕ್ಕೂ ಒಂದು ರಂಗ ನಕ್ಷತ್ರವನ್ನು ಕಳೆದುಕೊಂಡಂತಾಗಿದೆ ಎಂದು ಬಯಲಾಟ ಅಕಾಡೆಮಿ ಮಾಜಿ ಸದಸ್ಯರೂ, ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷರೂ ಆದ ಎನ್.ಎಸ್. ರಾಜು ವಿಷಾದ ವ್ಯಕ್ತಪಡಿಸಿದರು.
ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಕಂಚಿಕೆರೆ ನಟರಾಜ್ ಅವರ ಶ್ರದ್ಧಾಂಜಲಿ ಸಭೆಯನ್ನು ಕುರಿತು ಮಾತನಾಡಿದರು.
ಕಂಚಿಕೆರೆ ನಟರಾಜ್ ಅವರು ಸುಮಾರು ವರ್ಷಗಳ ಕಾಲ ಹಲವಾರು ನಾಟಕಗಳ ಮೂಲಕ ನಮ್ಮನ್ನು ರಂಜಿಸಿದವರು. ಅವರು ತಮ್ಮ ತಂದೆ ಕಂಚಿಕೆರೆ ಶಿವಣ್ಣ ನವರಂತೆ ಅದ್ಭುತ ಕಲಾವಿದರಾಗಿದ್ದರು ಎಂದು ಕಂಬನಿ ಮಿಡಿದರು.
ಇದೇ ಸಂದರ್ಭದಲ್ಲಿ ಕಲಾವಿದ ಪಿ. ಖಾದರ್ ಮಾತನಾಡಿ, ಕಂಚಿಕೆರೆ ನಟರಾಜ್ ಅವರು ಹಲವಾರು ನಾಟಕ ಕಂಪನಿಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ರಂಜಿಸುತ್ತಿದ್ದರು ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಪಿ.ಜಿ. ಪರಮೇಶ್ವರಪ್ಪ, ಮಾರ್ತಾಂಡಪ್ಪ, ಪಿ ತಿಪ್ಪೇಸ್ವಾಮಿ, ವಿಠೋಬರಾವ್ ನಲ್ವಡೆ, ಎ. ಸೂರೇಗೌಡ್ರು, ಬಿ. ಕೊಟ್ರೇಶ್, ನೀರ್ಥಡಿ ಬಸವರಾಜ್, ಎಂ.ಎಸ್. ಶಿವಕುಮಾರ ಸ್ವಾಮಿ, ಪಿ. ಹನುಮಂತಾಚಾರಿ, ಮೂಗಬಸಪ್ಪ ಮಡ್ರಳ್ಳಿ, ನೀಲಗುಂದ ಬಸವನ ಗೌಡ್ರು ಮತ್ತಿತರರು ಭಾಗವಹಿಸಿದ್ದರು.
ಐರಣಿ ಶೋಕ : ಕಂಚಿಕೆರೆ ನಟರಾಜ್ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಹಿರಿಯ ರಂಗಭೂಮಿ ಕಲಾವಿದರೂ, ಪತ್ರಕರ್ತರೂ ಆದ ಬಸವರಾಜ ಐರಣಿ, ನಟರಾಜ್ ಅವರ ಅಭಿನಯ ಮತ್ತು ವ್ಯಕ್ತಿತ್ವವನ್ನು ಮೆಲಕು ಹಾಕಿದ್ದಾರೆ.