ದಾವಣಗೆರೆ ಮೂಲದ ಪ್ರೊ. ಶೇಖರ್ ಅಯ್ಯರ್ ಇನ್ನಿಲ್ಲ

ದಾವಣಗೆರೆ ಮೂಲದ ಪ್ರೊ. ಶೇಖರ್ ಅಯ್ಯರ್ ಇನ್ನಿಲ್ಲ

ದಾವಣಗೆರೆ, ಆ. 4 – ದಾವಣಗೆರೆ ಮೂಲದ ಮೈಸೂರಿನ  ನಿವಾಸಿಯಾಗಿದ್ದ ಪ್ರೊ. ಶೇಖರ್ ಅಯ್ಯರ್ (67) ಅವರು ನಿನ್ನೆ ಸಂಜೆ ಮೈಸೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಕಳೆದ ಕೆಲವು ದಿನಗಳಿಂದ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಶೇಖರ್ ಅವರು ತಾಯಿ, ಪತ್ನಿ, ಪುತ್ರ, ಸೊಸೆಯನ್ನು ಅಗಲಿದ್ದಾರೆ.

ಪ್ರಾಥಮಿಕ ಶಾಲೆಯಿಂದ ಪದವಿಯವರೆಗೂ ದಾವಣಗೆರೆಯಲ್ಲಿಯೇ ಅಭ್ಯಾಸ ಮಾಡಿದ್ದ ಶೇಖರ್ ಅವರು, ದಾವಣಗೆರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿಯೂ ಮತ್ತು ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜ್ ಗಳಲ್ಲಿಯೂ ಸಹಸ್ರಾರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಅವರ ಶ್ರೇಯೋಭಿವೃದ್ಧಿಗೆ ಕಾರಣರಾಗಿದ್ದರು. ದಾವಣಗೆರೆಯಲ್ಲಿ ಬಿ.ಬಿ.ಎಂ. ಪದವಿ ಪಡೆದು ತದನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಬಿ.ಎ  ಪದವೀಧರರಾಗಿದ್ದ ಶೇಖರ್ ಎರಡು ಕೋರ್ಸ್‌ಗಳಲ್ಲಿ  ರಾಂಕ್‌ ಗಳಿಸಿದ್ದರು.

ಶೇಖರ್ ಅವರು ಕೇಂದ್ರದ  ನೌಕಾಪಡೆ,  ಮಂಡ್ಯದಲ್ಲಿರುವ ಮೈಶುಗರ್,  ಮೈಸೂರಿನ ಆಟೋಮೋಟಿವ್ ಆಕ್ಸೆಲ್ಸ್‌, ಬೆಂಗಳೂರು ಸಮೀಪದ ವೋಲ್ವೋ ಮೋಟಾರ್ಸ್‌ನಲ್ಲಿಯೂ  ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನೂರಾರು ಯುವಜನತೆಗೆ ಅದರಲ್ಲೂ ಮುಖ್ಯವಾಗಿ  ಕನ್ನಡದ ಯುವಕರಿಗೆ ಕೆಲಸ ನೀಡಿದ್ದನ್ನು ಅವರ ಅಭಿಮಾನಿಗಳು ಇಂದಿಗೂ ಸ್ಮರಿಸುತ್ತಾರೆ.

ಕಳೆದ ಕೆಲವು ವರ್ಷಗಳಿಂದ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದಲ್ಲಿ  ಮುಖ್ಯಸ್ಥರಾಗಿದ್ದರು. ಅಂತೆಯೇ ತಾವೇ ಅಭ್ಯಾಸ ಮಾಡಿದ ಮಾನಸ ಗಂಗೋತ್ರಿಯಲ್ಲಿಯೂ ಸಹ ಸಹಸ್ರಾರು  ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಕೀರ್ತಿ ಶೇಖರ್ ಅವರದು.

ಪ್ರೊ. ಶೇಖರ್ ಅವರ ನಿಧನಕ್ಕೆ ಹಿರಿಯ ರಂಗಭೂಮಿ ಕಲಾವಿದ ಎಸ್.ಎಸ್. ಸಿದ್ದರಾಜು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!