ದಾವಣಗೆರೆ, ಆ. 4- ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೆ ಒಳಗಾಗಿರುವ ಸಮಾಜಕ್ಕೆ ನ್ಯಾಯ ಕಲ್ಪಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಒಳ ಮೀಸಲಾತಿಗೆ ಐತಿಹಾಸಿಕ ತೀರ್ಪು ನೀಡಿರುವುದು ಸ್ವಾಗತಾರ್ಹ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಎನ್. ರುದ್ರಮುನಿ ಹರ್ಷ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ ಸಮಾಜ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದರಿಂದ ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಇದೀಗ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ಇದ್ದ ಅಡ್ಡಿ, ಆತಂಕಗಳು ನಿವಾರಣೆಯಾಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ, ಜಾರಿ ಮಾಡುವ ಭರವಸೆ ನಮಗಿದೆ ಎಂದರು.
ಆರ್ಥಿಕವಾಗಿ ತುಳಿತಕ್ಕೆ ಒಳಗಾದ ಸಮಾಜ ನಮ್ಮದು. ನಮ್ಮಲ್ಲಿಯೇ ಒಳಪಂಗಡಗಳಿವೆ. ಅಂತವರಿಗೆ ಈ ತೀರ್ಪು ಅನ್ವಯವಾಗಲಿದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರು ಸುದೀರ್ಘ 565 ಪುಟಗಳ ತೀರ್ಪು ನೀಡಿದೆ. ಇದನ್ನು ಸ್ವಾಗತಿಸುತ್ತಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಪ್ರಕಾಶ್, ಎಸ್. ಶೇಖರಪ್ಪ, ಕೊಟ್ರಬಸಪ್ಪ, ರೇವಣಸಿದ್ಧಪ್ಪ, ನವೀನ್,ಕೊಂಡಜ್ಜಿ ರಾಘವೇಂದ್ರ, ಅಣ್ಣಪ್ಪ ಮತ್ತಿತರರಿದ್ದರು.