ದಾವಣಗೆರೆ, ಆ. 2-ನಾನು ನಿಮ್ಮ ಮೇಲೆ ಮಾಡುವ ಆರೋಪಗಳಿಗೆಲ್ಲಾ ದಾಖಲೆಗಳಿವೆ. ನೀವೂ ಸಹ ಬಾಯಿ ಚಪಲಕ್ಕೆ ನಮ್ಮ ಮೇಲೆ ಆರೋಪ ಮಾಡದೆ, ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡಿ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಎಂ. ಸಿದ್ದೇಶ್ವರ ಹಾಗೂ ಜಿ. ಮಲ್ಲಿಕಾರ್ಜುನಪ್ಪ ಅವರನ್ನು ದಾವಣಗೆರೆಗೆ ಕರೆ ತಂದವರು ನಾವು ಎಂದು ಹೇಳಿದ್ದಾರೆ. ಹಾಗಾದರೆ 1996ರ ಲೋಕಸಭಾ ಚುನವಣೆಯಲ್ಲಿ ಹಿಂದುಳಿದ ವರ್ಗಗಳ ನಾಯಕ ದಿ.ಚನ್ನಯ್ಯ ಒಡೆಯರ್ ಅವರನ್ನುಸೋಲಿಸಿದ್ದು ಸ್ವತಃ ನೀವೇ ಎಂದು ಒಪ್ಪಿಕೊಂಡಂತಾಯಿತು ಎಂದರು.
ಶಿವಶಂಕರಪ್ಪ ಹಾಗೂ ಅವರ ಪುತ್ರ ಮಲ್ಲಿಕಾರ್ಜುನ್, ಮಾಜಿ ಸಂಸದ ಸಿದ್ದೇಶ್ವರ್ ಹಾಗೂ ಹಿಂದಿನ ದೂಡಾ ಅಧ್ಯಕ್ಷರುಗಳ ಮೇಲೆ ಮಾಡಿರುವ ಆರೋಪಗಳಿಗೆ ದಾಖಲೆಗಳನ್ನು ನೀಡಲಿ. ನಿಮ್ಮದೇ ಸರ್ಕಾರವಿದೆ ತನಿಖೆಯನ್ನೂ ನಡೆಸಲಿ ಎಂದರು. ನೀವು ನಡೆಸಿದ ಭ್ರಷ್ಟಾಚಾರಗಳ ಬಗ್ಗೆ ನೀವು ಹೇಳಿದ ಜಾಗಕ್ಕೆ ನಾನು ದಾಖಲೆ ತರುತ್ತೇನೆ. ನಮ್ಮ ಮೇಲಿನ ಆರೋಪಗಳಿಗೆ ನೀವು ತನ್ನಿ. ಮಾಧ್ಯಮಗಳ ಎದುರು ಬಹಿರಂಗ ಪಡಿಸೋಣ ಎಂದು ಜಾಧವ್ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಜಯಪ್ರಕಾಶ್ ಕೊಂಡಜ್ಜಿ, ಟಿಂಕರ್ ಮಂಜಣ್ಣ, ಕಿಶೋರ್ ಕುಮಾರ್, ಶಿವನಗೌಡ ಟಿ.ಪಾಟೀಲ್ ಇದ್ದರು.