ದಾವಣಗೆರೆ, ಜು. 28- ಸ್ಪೆಷಲ್ ಒಲಂಪಿಕ್ಸ್ ಭಾರತ್ ಹಾಗೂ ದಾವಣಗೆರೆ ಜಿಲ್ಲಾ ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ ಬೂಚಿ ಪಂದ್ಯಾವಳಿಯನ್ನು ನಾಳೆ ದಿನಾಂಕ 29 ರ ಸೋಮವಾರ ಬೆಳಿಗ್ಗೆ 10.30 ಕ್ಕೆ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಸಂಸ್ಥೆ ಖಜಾಂಚಿ ನಾಗರಾಜ್ ಶಿವನಪ್ಪ ನವರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಪಂದ್ಯಾವಳಿಯನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ. ಗಂಗಾಧರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಓ ಸುರೇಶ್ ಇಟ್ನಾಳ್, ಡಾ. ಕೆ.ಕೆ. ಪ್ರಕಾಶ್, ರೂಪ್ ಸಿಂಗ್, ಅಮರೇಂದ್ರ, ಅಂಜಿನಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸುಮಾರು ನೂರು ವಿಶೇಷ ಮಕ್ಕಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಪೆಷಲ್ ಒಲಂಪಿಕ್ಸ್ ಬೌದ್ಧಿಕ ಸವಾಲನ್ನು ಎದುರಿಸುತ್ತಿರುವ ಮಕ್ಕಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಆಟೋಟಗಳ ತರಬೇತಿ ಹಾಗೂ ಸ್ಪರ್ಧೆಗಳನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ಸಂಸ್ಥೆಯಾಗಿದೆ ಎಂದರು. ನಮ್ಮ ರಾಜ್ಯದಿಂದ `ಬೂಚಿ’ ತಂಡವನ್ನು ಆಯ್ಕೆ ಮಾಡಿ ಕಳುಹಿಸಬೇಕಾಗಿದೆ. ಹಾಗಾಗಿ ಜಿಲ್ಲಾ ಘಟಕದಿಂದ ಪಂದ್ಯಾವಳಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಮಣ್‌ಲಾಲ್ ಪಿ. ಸಂಘವಿ, ಹನುಮೇಶ್, ಯಶೋಧಮ್ಮ ಉಪಸ್ಥಿತರಿದ್ದರು.