ದಾವಣಗೆರೆ, ಜು.23- ಮಕ್ಕಳಿಲ್ಲದ ಕೊರಗಿನಿಂದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಭಟ್ಟೋಳ್ ಷಣ್ಮುಖಪ್ಪ (65) ಹಾಗೂ ಇಂದ್ರಮ್ಮ (50) ಆತ್ಮಹತ್ಯೆಗೆ ಶರಣಾಗಿರುವ ದಂಪತಿ.
ದಂಪತಿಗೆ ಮದುವೆಯಾಗಿ 30 ವರ್ಷ ಕಳೆದಿದ್ದು, ಮಕ್ಕಳಾಗಿಲ್ಲವೆಂದು ಮಾನಸಿಕವಾಗಿ ಕುಗ್ಗಿದ್ದರು. ಅಷ್ಟೇ ಅಲ್ಲದೇ ಕೆಲ ದಿನಗಳ ಹಿಂದೆ ಷಣ್ಮುಖಪ್ಪ ಹಾಗೂ ಇಂದ್ರಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮ ಆರೈಕೆ ಮಾಡುವವರು ಯಾರೂ ಇಲ್ಲ ಎಂದು ಬೇಸರದಲ್ಲಿದ್ದರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡಿದ್ದ ದಂಪತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಪತಿ ಷಣ್ಮುಖಪ್ಪ ಭಾನುವಾರ ಸಾವನ್ನಪ್ಪಿದರೆ, ಚಿಕಿತ್ಸೆ ಫಲಿಸದೇ ಸೋಮವಾರ ಬೆಳಗ್ಗೆ ಪತ್ನಿ ಸಾವನ್ನಪ್ಪಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.