ಹರಪನಹಳ್ಳಿ, ಜು.16- ತೋಟಗಾರಿಕೆ ಇಲಾಖೆಯಿಂದ ತಾಲ್ಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಯಸಿಂಹ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆಯಡಿ ಅಂಗಾಂಶ ಬಾಳೆ, ದಾಳಿಂಬೆ, ತರಕಾರಿ ಬೆಳೆಗಳು, ಸಮಗ್ರ ರೋಗ, ಕೀಟ ನಿಯಂತ್ರಣ, ನೀರು ಸಂಗ್ರಹಣಾ ಘಟಕ, ಪ್ಯಾಕ್ ಹೌಸ್, ಈರುಳ್ಳಿ ಶೇಖರಣೆ ಘಟಕ ಹಾಗೂ ಇತರೆ ಘಟಕಗಳಿಗೆ ಸಹಾಯಧನ ನೀಡಲಾಗವುದು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಯಂತ್ರೋಪಕರಣ ಖರೀದಿಸಲು ಸಹಾಯಧನ ನೀಡಲಾಗುವುದು. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ದಾಳಿಂಬೆ, ನುಗ್ಗೆ ಮತ್ತು ಡ್ರ್ಯಾಗನ್ ಪ್ರೂಟ್ ಬೆಳೆಗೆ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನೀರಾವರಿ ಸೌಕರ್ಯವಿರುವ ರೈತರ ಜಮೀನುಗಳಲ್ಲಿ ತೆಂಗು, ಮಾವು, ಸಪೋಟ, ಅಂಗಾಂಶ ಬಾಳೆ, ಅಂಜೂರ, ಪಪ್ಪಾಯಿ, ಪೇರಲ, ಹಾಗೂ ಇತರೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮ ಕೈಗೊಳ್ಳಬಹುದು.
ಈ ಎಲ್ಲಾ ಯೋಜನೆಗಳ ಸಹಾಯಧನ ಪಡೆಯಲು ಅರ್ಹ ಹಾಗೂ ಆಸಕ್ತ ರೈತರು ಇದೇ ದಿನಾಂಕ 20 ರೊಳಗೆ ಕೈಬರಹ ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್, ಐಡಿ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಕೊಳವೆ ಬಾವಿ ಮತ್ತು ಬೆಳೆ ದೃಢೀಕರಣ ಪ್ರತಿಯನ್ನು ತೋಟಗಾರಿಕೆ ಇಲಾಖೆಯ ಕಚೇರಿಗೆ ಸಲ್ಲಿಸುವಂತೆ ಜಯಸಿಂಹ ತಿಳಿಸಿದ್ದಾರೆ.