ನಗರದಲ್ಲಿ ಇಂದು ಹಿರಿಯ ಸಾಹಿತಿ ಟಿ. ಗಿರಿಜಾ ಸ್ಮರಣೆ

ನಗರದಲ್ಲಿ ಇಂದು ಹಿರಿಯ ಸಾಹಿತಿ ಟಿ. ಗಿರಿಜಾ ಸ್ಮರಣೆ

ಮಧ್ಯ ಕರ್ನಾಟಕದ ಹೆಸರಾಂತ ಲೇಖಕರೂ, ಸಂಶೋಧಕರೂ, ಸಂಘಟಕರೂ ಆಗಿದ್ದ ಶ್ರೀಮತಿ ಟಿ. ಗಿರಿಜಾ ಅವರ 10ನೇ ವರ್ಷದ ಸ್ಮರಣಾರ್ಥ 

 ಗಿರಿಜಾ ಅವರು ನಿಧನರಾಗಿ 10 ವರ್ಷಗಳು ಉರುಳಿದರೂ ಜನಮಾನಸದಲ್ಲಿ ಅವರ ನೆನಪು ಮಾಸದೆ ಇಂದಿಗೂ ಹಸಿರಾಗಿಯೇ ಉಳಿದಿದೆ. ತಮ್ಮೆಲ್ಲ ದೈಹಿಕ ಅನಾರೋಗ್ಯದ ಮಧ್ಯೆಯೂ ಮಹಿಳೆಗೆ ಸವಾಲೆನಿಸಿದ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಚಿತ್ರದುರ್ಗ ಜಿಲ್ಲಾ ದರ್ಶನಿ,  ದಾವಣಗೆರೆ ಇದು ನಮ್ಮ ಜಿಲ್ಲೆ ಹಾಗೂ ಭಾರತದ ನದಿಗಳು ಎಂಬ ಬೃಹತ್ ಗ್ರಂಥಗಳನ್ನು ಪ್ರಕಟಿಸಿರುವುದು ಸಾಮಾನ್ಯ ಕೆಲಸವಲ್ಲ. ಅದೊಂದು ಸಾಹಸವೇ ಸರಿ. ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯವನ್ನು ಏಕಾಂಗಿಯಾಗಿ ಮಾಡಿ ದಾಖಲೆಯನ್ನೇ ನಿರ್ಮಿಸಿದ್ದರು.

ವನಿತಾ ಸಮಾಜದ ರೂವಾರಿ ಹಾಗೂ ಅನನ್ಯ ಸಾಧಕರಾಗಿದ್ದ ಡಾ. ಸಿ. ನಾಗಮ್ಮ ಕೇಶವಮೂರ್ತಿ ಅವರ ಮನದಾಸೆಯಂತೆ ಟಿ.ಗಿರಿಜ  ಅವರು ದಾವಣಗೆರೆಯಲ್ಲಿ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಮಹಿಳೆಯರನ್ನು ಒಂದುಗೂಡಿಸಿ ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯನ್ನು ಹುಟ್ಟು ಹಾಕಿ ಹೆಮ್ಮರವಾಗಿ ಬೆಳಸಿದ್ದರು. ಜೊತೆಗೆ ಮಹಿಳೆಯರು ಬರೆದ ಸಾಹಿತ್ಯವನ್ನು ಪರಿಷ್ಕರಿಸಿ ಮುದ್ರಿಸಿ ಪ್ರಕಟಿಸಲು ಪ್ರೇರೇಪಣೆ ನೀಡಿದ್ದರ ಫಲವಾಗಿ ಇಂದು ದಾವಣಗೆರೆಯಲ್ಲಿ  ನೂರಾರು ಮಹಿಳಾ ಲೇಖಕಿಯರು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜೊತೆಗೆ `ಜನತಾವಾಣಿ’ ಪ್ರಾಯೋಜಕತ್ವದಲ್ಲಿ ದಾವಣಗೆರೆ ಜಿಲ್ಲೆಯ ಉದಯೋನ್ಮುಖ ಬರಹಗಾರ್ತಿಯೊಬ್ಬರಿಗೆ `ಪ್ರತಿವರ್ಷ ವನಿತಾ ಸಾಹಿತ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವನ್ನು ಆರಂಭಿಸಿದ್ದು ಅದು ಇಂದಿಗೂ ಮುಂದುವರೆದಿದೆ. 

ಹೀಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಬಹುಮುಖ ಪ್ರತಿಭೆಯ   ಟಿ. ಗಿರಿಜಾ ಅವರ 10ನೇ ವರ್ಷದ ಪುಣ್ಯಸ್ಮರಣೆಯನ್ನು  ಇಂದು ಸಂಜೆ 5 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ವನಿತಾ ಸಾಹಿತ್ಯ ವೇದಿಕೆ ಹಾಗೂ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. 

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಮರ್ಶಕ ಡಾ.ಲೋಕೇಶ ಅಗಸನಕಟ್ಟೆ ಟಿ.ಗಿರಿಜಾ ಅವರ ಸಾಧನೆ ಕುರಿತು ಮಾತನಾಡುವರು. 

ಇದೇ ಸಂದರ್ಭದಲ್ಲಿ ಕವಯಿತ್ರಿ ಶ್ರೀಮತಿ ಕೋಮಲ ವಸಂತಕುಮಾರ್ ಅವರ ಪ್ರಥಮ ಕವನ ಸಂಕಲನ `ಭಕ್ತಿಭಾವ ಲಹರಿ’ ಕೃತಿಯು ಲೋಕಾರ್ಪಣೆಗೊಳ್ಳಲಿದೆ. 

ಡಾ. ಶಶಿಕಲಾ ಪಿ. ಕಷ್ಣಮೂರ್ತಿ ಕೃತಿಯ ಅವಲೋಕನ ಮಾಡಲಿದ್ದಾರೆ.  ಸಿ. ಕೆ. ಆನಂದತೀರ್ಥಾಚಾರ್ ಹಾಗೂ ತಾಲ್ಲೂಕು ಕ.ಸಾ.ಪ. ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ನಾಗರಾಜ್  ತಿಳಿಸಿದ್ದಾರೆ.

error: Content is protected !!