ಸರ್ವೇ ಚೈನಿಗೆ ಮುದ್ರೆ ಹಾಕಿಸದ ಕಾರಣ ರೈತರಿಗೆ ಅನ್ಯಾಯ

ದಾವಣಗೆರೆ, ಜು.7- ಸರ್ವೇ ಚೈನಿಗೆ ಪ್ರತಿ ವರ್ಷ ಮುದ್ರೆ ಹಾಕಿಸಬೇಕೆಂಬ ನಿಯಮವಿದ್ದರೂ, ಭೂಮಾಪನ ಇಲಾಖೆಯವರು ಕಳೆದ ಹಲವು ವರ್ಷಗಳಿಂದ ತೂಕ ಮತ್ತು ಅಳತೆ ಇಲಾಖೆಯಲ್ಲಿ ಚೈನು ಅಳತೆ ಮಾಡಿಸದ ಕಾರಣ ಜಮೀನು ಅಳೆದ ನಂತರ ರೈತರಿಗೆ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ನಾಗರಾಜ್ ಸುರ್ವೇ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐದಾರು ವರ್ಷಗಳಿಂದ ಭೂಮಾಪನ ಇಲಾಖೆಯವರು ಜಮೀನು ಅಳೆಯುವ ಚೈನಿನ ಅಳತೆ ಮಾಡಿಸಿ, ಮುದ್ರೆಯೇ ಹಾಕಿಸಿಲ್ಲ ಎಂದರು.

ಹಲವು ವರ್ಷಗಳಿಂದ ಈ ಚೈನುಗಳಲ್ಲಿಯೇ ಅಳತೆ ಮಾಡಿಕೊಂಡು ಬರುತ್ತಿರುವ ಕಾರಣ ಪ್ರತಿ ಲಿಂಕ್‌ಗಳ ಮಧ್ಯೆ ಸವಕಳಿಯಾಗಿ, ಅಳತೆಯಲ್ಲಿ ವ್ಯತ್ಯಾಸವಾಗಿ ರೈತರ ಮಧ್ಯೆ ಜಗಳಗಳಾಗುತ್ತಿವೆ. ಅಲ್ಲದೇ, ಪೋಡ್ ಮಾಡುವಾಗ ಸರ್ವೇ ನಂಬರ್ ಅದಲು ಬದಲಾದ ಪರಿಣಾಮ ಎಷ್ಟೋ ಕೇಸ್‌ಗಳು ಸಿವಿಲ್ ಕೋರ್ಟ್ ಮೆಟ್ಟಿಲು ಏರಿವೆ. ಆದ್ದರಿಂದ ಭೂಮಾಪನ ಇಲಾಖೆಯು ತಕ್ಷಣವೇ ಹಲವು ವರ್ಷಗಳಿಂದ ಬಳಕೆ ಮಾಡಿಕೊಂಡು ಬಂದಿರುವ ಚೈನು ಬದಲಿಸಿ, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಗೌರವಾಧ್ಯಕ್ಷ ಪಿ.ಜಿ. ಮುನಿಯಪ್ಪ, ಜಿಲ್ಲಾಧ್ಯಕ್ಷ ಯು.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಶ್ರೇಯಸ್ ಇದ್ದರು.

error: Content is protected !!