ಇಂದು ಭದ್ರಾ ಜಲಾಶಯ ವೀಕ್ಷಣೆ, ಪ್ರತಿಭಟನೆ

ದಾವಣಗೆರೆ, ಜು.7- ಭದ್ರಾ ಜಲಾಶಯದ ನೀರು ಸೋರಿಕೆ ಖಂಡಿಸಿ ಹಕ್ಕೊತ್ತಾಯ ಮಂಡಿಸಲು ನಾಳೆ ದಿನಾಂಕ 8ರ ಸೋಮವಾರ ಬೆಳಗ್ಗೆ 11ಕ್ಕೆ ಜಲಾಶಯಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರಕ್ಕಾಗಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕರೆ ನೀಡಿದರು.

ಭಾನುವಾರ ನಗರದ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯದ ನೀರು ಸೋರಿಕೆ ಕುರಿತು ಅಧಿಕಾರಿಗಳು ಉತ್ತರಿಸದಿದ್ದರೆ ಅಲ್ಲೇ ಧರಣಿ ಕೂರುತ್ತೇವೆ ಎಂದು ಹೇಳಿದರು.

ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆ ಇದ್ದು ಇದಕ್ಕೆ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದರು.

ಡ್ಯಾಂ ದುರಸ್ತಿಗೆ ಬೇಸಿಗೆಯಲ್ಲಿ ಕ್ರಮ ಕೈಗೊಳ್ಳದೇ ಮಳೆಗಾಲದಲ್ಲಿ ಕೈಗೆತ್ತಿಕೊಂಡಿರುವುದು ಸಮಸ್ಯೆಗೆ ಮೂಲ  ಕಾರಣ ಎಂದು ದೂರಿದರು.

ಇದು ರೈತರಿಗೆ ಸಂಬಂಧಿಸಿದ ಕಾಮಗಾರಿ ಆದ್ದರಿಂದ ತುರ್ತಾಗಿ ದುರಸ್ತಿ ಮಾಡಿಸುವುದನ್ನು ಬಿಟ್ಟು ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ರೈತರ ವಿಚಾರದಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಡ್ಯಾಮ್‌ ದುರಸ್ತಿಗೆ ಸರ್ಕಾರದ ಬಳಿ ಹಣ ಇಲ್ಲದ ಕಾರಣ ಗೇಟಿಗೆ ಕಾಂಕ್ರೀಟ್‌ ಹಾಕಿಸಲು ಟೆಂಡರ್‌ ಕರೆದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆಯೇ ಹೊರತು, ದುರಸ್ತಿ ಮಾಡುತ್ತಿಲ್ಲ ಎಂದು ಟೀಕಿಸಿದರು.

ಡ್ಯಾಮಿನ ಗೇಟ್ ಸರಿಯಾಗಿ ನಿರ್ವಹಣೆ ಮಾಡದ ಕಾರಣ ದಿನಕ್ಕೆ 4ರಿಂದ 5 ಸಾವಿರ ಕ್ಯೂಸೆಕ್‌ ನೀರು ನದಿಗೆ ಹರಿದು ಹೋಗುತ್ತಿದೆ ಎಂಬ ಮಾಹಿತಿ ಬಂದಿದೆ ಎಂದು ಹೇಳಿದರು.

ಮಳೆಗಾಲದಲ್ಲಿ ಡ್ಯಾಂನಲ್ಲಿ ಸಂಗ್ರಹ ಆಗಬೇಕಿದ್ದ ನೀರು ಅಧಿಕಾರಿಗಳ ಯಡವಟ್ಟಿನಿಂದ ಹೊರ ಹೋದರೆ ಯಾರು ಹೊಣೆ ಎಂಬುದು ರೈತ ಮುಖಂಡರ ಪ್ರಶ್ನೆ ಆಗಿದೆ ಎಂದರು.

ಬಿಜೆಪಿ ಮುಖಂಡ ಮಾಡಾಳ್‌ ಮಲ್ಲಿಕಾರ್ಜುನ್‌ ಮಾತನಾಡಿ, ಜನ ಪ್ರತಿನಿಧಿ ಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ  ಡ್ಯಾಂನಿಂದ ಪ್ರತಿ ದಿನ 5 ಸಾವಿರ ಕ್ಯೂಸೆಕ್‌ ನೀರು ನದಿಗೆ ಹರಿದು ಹೋಗುತ್ತಿದೆ ಎಂದರು. ಗೇಟ್‌ ದುರಸ್ತಿಗೆ ಕಾಂಕ್ರಿಟ್‌ ಹಾಕಲು ಟೆಂಡರ್‌ ಕರೆದಿದ್ದರೂ ಸಹ ಸರ್ಕಾರದ ಬೇಜವಾಬ್ದಾರಿ ಯಿಂದ ಜಲಾಶಯದ ದುರಸ್ತಿ ಕಾಮಗಾರಿ ದೂರ ಸರಿದಿದೆ ಎಂದು ಗುಡುಗಿದರು.

ಈ ವೇಳೆ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್‌,  ಬಿ.ಕೆ. ಶಿವಕುಮಾರ್‌, ಚಂದ್ರಶೇಖರ್‌ ಪೂಜಾರ್‌, 6ನೇ ಕಲ್ಲು ವಿಜಯ್‌ ಕುಮಾರ್‌, ಪ್ರವೀಣ್ ಜಾಧವ್‌, ರಾಜು ಮತ್ತು ಸತೀಶ್‌ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!