ಹೊನ್ನಾಳಿ, ಜು.4- ತಾಲ್ಲೂಕಿನ ಹರಳಹಳ್ಳಿ ಗ್ರಾಮದ ರೈತ ಡಿ.ಕೆ. ಕಡೂರಪ್ಪ (48) ಸಾಲ ಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಡೂರಪ್ಪ ಅವರು 2.5 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬೀಜ, ಗೊಬ್ಬರ, ಔಷಧಿ ಖರೀದಿಗೆ, ಬೋರ್‍ವೆಲ್ ಕೊರೆಸಲು ಹಾಗೂ ಟಿಬಿ ವೃತ್ತದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದಲ್ಲೂ ಸಾಲ ಮಾಡಿದ್ದು, ಸಂಜೆ 5 ಗಂಟೆಗೆ ಸಾಲಬಾಧೆಯಿಂದ ವಿಷ ಸೇವಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತ ರೈತನ ಪತ್ನಿ ಪುಷ್ಪಲತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೊನ್ನಾಳಿ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಹೆಚ್.ಸುನಿಲ್‍ಕುಮಾರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.