ನಿದ್ದೆಗೆ ಜಾರಿದ ಬಸ್ ಡ್ರೈವರ್: 7 ಜನರಿಗೆ ಗಾಯ

ಹೊನ್ನಾಳಿ, ಜು.4- ಶಿವಮೊಗ್ಗದಿಂದ ಹೊನ್ನಾಳಿ ಮಾರ್ಗವಾಗಿ ದಾವಣಗೆರೆಗೆ ಹೋಗುತ್ತಿದ್ದ ಹರಿಹರ ಡಿಪೋಗೆ ಸಂಬಂಧಪಟ್ಟ ಕೆಎಸ್ಸಾರ್ಟಿಸಿ ಬಸ್‍ನ ಚಾಲಕ ನಿದ್ದೆ ಮಂಪರಿನಲ್ಲಿ ಹೊನ್ನಾಳಿಯ ಬಲ್ಭ್‌ ಫ್ಯಾಕ್ಟರಿಯ ಬಳಿಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮುಂದಿನ 2 ಚಕ್ರಗಳು ಸಿಡಿದು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ 27 ಪ್ರಯಾಣಿಕರಲ್ಲಿ, ಚಾಲಕ ತೆಲಗಿ ಸಿದ್ದಪ್ಪ ಸೇರಿದಂತೆ 7 ಜನರಿಗೆ ಸಣ್ಣ – ಪುಟ್ಟ ಗಾಯಗಳಾಗಿವೆ.

ಬಹುತೇಕ ಪ್ರಯಾಣಿಕರು ಮಂಗಳೂರಿನ ಯೆನಪೋಯಾ, ಮಣಿಪಾಲ್‍ನ ಕಸ್ತೂರಿ ಬಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿ ಮರಳಿ ತಮ್ಮ ಊರುಗಳಿಗೆ ಮರಳುವಾಗ ಮತ್ತೆ ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬಂದೊದಗಿದ್ದು ವಿಪರ್ಯಾಸವೇ ಸರಿ. 

ಬೆಳಿಗ್ಗೆ 4.30 ಕ್ಕೆ ಅಪಘಾತ ಸಂಭವಿಸಿದ್ದು, ಮಾಹಿತಿ ತಿಳಿದ ತಕ್ಷಣವೇ ಗಾಯಾಳುಗಳನ್ನು ಹೊನ್ನಾಳಿ ಡಿಪೋ ವ್ಯವಸ್ಥಾಪಕ ಕೆ.ಮಹೇಶ್ವರಪ್ಪ ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಉಪಚರಿಸಿ, ಒಬ್ಬ ಗಾಯಾಳು ಮಹಿಳೆಗೆ 10,000 ಮತ್ತು 5 ಗಾಯಾಳುಗಳಿಗೆ ತಲಾ 5000 ದಂತೆ ಒಟ್ಟು 35,000 ಪರಿಹಾರವನ್ನು ನೀಡಿ, ದಾವಣಗೆರೆಗೆ ಕಳಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.

ದಾವಣಗೆರೆಯ ವಿಭಾಗೀಯ ಯಾಂತ್ರಿಕ ಅಧಿಕಾರಿ ಕೆ.ವೆಂಕಟೇಶ್, ವಿಭಾಗೀಯ ಸಂಚಾರಿ ಅಧಿಕಾರಿ ಫಕೃದ್ದೀನ್ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳಿಗೆ ಸಾಂತ್ವನ ಹೇಳಿದರು.

error: Content is protected !!