8ರಂದು ನೂತನ ರಥದಲ್ಲಿ ಪುರಿ ಶ್ರೀ ಜಗನ್ನಾಥ ಯಾತ್ರೆ

ದಾವಣಗೆರೆ, ಜು.4- ಅಂತರರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್‌) ವತಿಯಿಂದ ನಗರದಲ್ಲಿ ಇದೇ ದಿನಾಂಕ 8ರಂದು 3ನೇ ವರ್ಷದ ಪುರಿ ಶ್ರೀ ಜಗನ್ನಾಥ ರಥಯಾತ್ರೆ ಅದ್ಧೂರಿಯಾಗಿ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸುವಂತೆ ಇಸ್ಕಾನ್‌ ಜಿಲ್ಲಾ ಮುಖ್ಯಸ್ಥರಾದ ಅವಧೂತ ಚಂದ್ರ ದಾಸರು ಮನವಿ ಮಾಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 1.30ಕ್ಕೆ ಮಂಡಿಪೇಟೆಯ ಕೋದಂಡರಾಮ ದೇವಸ್ಥಾನದಿಂದ ನೂತನ ರಥದಲ್ಲಿ, ಜಗನ್ನಾಥನ ರಥಯಾತ್ರೆ ಜರುಗಲಿದೆ ಎಂದು ತಿಳಿಸಿದರು.

ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್‌ ರಥಯಾತ್ರೆ ಉದ್ಘಾಟಿಸಲಿದ್ದಾರೆ. ಸಂಜೆ 5ಕ್ಕೆ ಜಗನ್ನಾಥನ ಮಹಾಮಂಗಳಾರತಿ ಆದ ನಂತರ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಸಮಾರೋಪ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌  ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. 

ಸಮಾರೋಪ ಕಾರ್ಯಕ್ರಮದಲ್ಲಿ ನೃತ್ಯ, ನಾಟಕ ಮತ್ತು ಗುರುಗಳಿಂದ ಆಶೀರ್ವಚನ ಹಾಗೂ ಪ್ರಸಾದ ವ್ಯವಸ್ಥೆ ಆಯೋಜಿಸಿದೆ ಎಂದರು.

ಯಾತ್ರೆಗೆ 25ರಿಂದ 30 ಸಾವಿರ ಜನ ಸೇರುವ ನಿರೀಕ್ಷೆ ಹೊಂದಿದ್ದು, ಈ ನಿಟ್ಟಿನಲ್ಲಿ ಹಲವು ಸಂಘ-ಸಂಸ್ಥೆಗಳು ಪ್ರಸಾದ ವ್ಯವಸ್ಥೆ ಮಾಡಿಸಲು ಒಪ್ಪಿವೆ. ಇದನ್ನು ಹೊರತು ಪಡಿಸಿ ಆಸಕ್ತ ದಾನಿಗಳು ವಸ್ತು ರೂಪದಲ್ಲಿ ದಾನ ನೀಡುವಂತೆ ಕೇಳಿಕೊಂಡರು

ಉತ್ಸವ ಸಮಿತಿಯ ಗೌರವ ಕಾರ್ಯದರ್ಶಿ ಕೆ.ಬಿ. ಶಂಕರ ನಾರಾಯಣ್‌ ಮಾತನಾಡಿ, 11 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ರಥವು ಯಾತ್ರೆಗೆ ಸಜ್ಜಾಗಿದ್ದು, ಇಂತಹ ಕಾರ್ಯಕ್ರಮ ಜನರಲ್ಲಿ ಧರ್ಮ ಜಾಗೃತಿ ಮತ್ತು ಭಕ್ತಿ ಭಾವನೆ ಮೂಡಿಸಲು ಅನುಕೂಲ ಎಂದು ಹೇಳಿದರು.

ಉತ್ಸವ ಸಮಿತಿಯ ಉಪಾಧ್ಯಕ್ಷ ನಲ್ಲೂರು ರಾಜಕುಮಾರ್‌, ಕಾರ್ಯದರ್ಶಿಗಳಾದ ಕಾಸಲ್‌ ವಿ. ಬದ್ರಿನಾಥ್‌, ಮಾಜಿ ಮೇಯರ್‌ ಎಸ್‌.ಟಿ ವೀರೇಶ್‌, ಖಜಾಂಚಿ ಕೆ. ಪ್ರಸನ್ನ ಕುಮಾರ್‌, ಸ್ಪೂರ್ತಿ ಸೇವಾ ಟ್ರಸ್ಟಿನ ಬಿ. ಸತ್ಯನಾರಾಯಣ ಮೂರ್ತಿ ಗೋಷ್ಠಿಯಲ್ಲಿದ್ದರು.

error: Content is protected !!