ಮಾದಕ ವಸ್ತು ಬದುಕನ್ನು ಕಸಿದುಕೊಳ್ಳುತ್ತದೆ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್

ಕಾರಾಗೃಹ ನಿವಾಸಿಗಳಿಗೆ ಜಾಗೃತಿ ಕಾರ್ಯಕ್ರಮ

ದಾವಣಗೆರೆ, ಜು.3- ಮಾದಕ ವಸ್ತುಗಳು ನಮ್ಮ ಜೀವನವನ್ನು ಹಾಳು ಮಾಡುವುದಲ್ಲದೇ ನಮ್ಮನ್ನು ದೈಹಿಕ, ಮಾನಸಿಕವಾಗಿ ಹಾಳು ಮಾಡುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ತಿಳಿಸಿದರು.

ಜಿಲ್ಲಾ ಕಾರಾಗೃಹ ಇಲಾಖೆಯ ಸಂಭಾಗಣದಲ್ಲಿ ಕಳೆದ ವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣಿಕೆ ವಿರೋಧಿ ದಿನದ ಪ್ರಯುಕ್ತ ಕಾರಾಗೃಹ ನಿವಾಸಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಇಂದಿನ ಯುವ ಸಮೂಹವು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಯುವಕರು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಆಲೋಚನೆ ಮಾಡಬೇಕೆ ಹೊರತು, ದುರಾಲೋಚನೆ ಮಾರ್ಗದ ಕಡೆ ಗಮನಹರಿಸಬಾರದು ಎಂದರು.

ಈಗಿನ ಕಾಲೇಜಿನ ಯುವಕರು ತಂಬಾಕು, ಸಿಗರೇಟ್ ಇನ್ನಿತರೆ ಮಾದಕ ವಸ್ತುಗಳನ್ನು ಉಪಯೋಗಿಸುತ್ತಿದ್ದು. ವಿಲಾಸಿ ಜೀವನಕ್ಕೆ ಅವಲಂಬನೆಯಾಗುತ್ತಿದ್ದಾರೆ. ಕೆಲ ಕೀಡಿಗೇಡಿಗಳು ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಲ್ಲಿ ಯುವಕರಿಗೆ ಆಸೆ ತೋರಿಸಿ ಯುವಕರನ್ನು ತಪ್ಪುದಾರಿಯತ್ತ ಕರೆದೊಯ್ಯುತ್ತಿದ್ದಾರೆ. ಮಾದಕ ವ್ಯಸನಕ್ಕೆ ದಾಸರಾದವರು ಪರಿಜ್ಞಾನವಿಲ್ಲದೇ ನಶೆಯಲ್ಲಿಯೇ ಏನಾದರೂ ಅವಘಡಗಳನ್ನು ಮಾಡಿಕೊಂಡು ಕಾರಾಗೃಹಕ್ಕೆ ಬಂದಿರುವವರೇ ಹೆಚ್ಚಾಗಿದೆ. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವಿಕೆ ಯಲ್ಲಿ ಯೋಗ, ಧ್ಯಾನದಲ್ಲಿ ನಿರತರಾಗಬೇಕು ಮತ್ತು ಕಾರಾಗೃಹವು ನಿಮಗೆ ಪರಿವರ್ತನಾ ಮಂದಿರವಿದ್ದಂತೆ, ಇಲ್ಲಿ ಬಂದಿರುವ ಎಲ್ಲರೂ ಕೂಡ ತಮ್ಮ ಮನಃಪರಿವರ್ತನೆ ಮಾಡಿಕೊಂಡು ಹೊರಗಡೆ ಹೋದ ನಂತರ ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ಮಾತನಾಡಿ, ಅಕ್ರಮ ಮಾದಕ ವಸ್ತುಗಳು ಮತ್ತು ವಿನೋದ ಉಂಟು ಮಾಡುವ ಡ್ರಗ್ಸ್‍ಗಳಲ್ಲಿ ಕೆಲ ಕೀಡಿಗೇಡಿಗಳು ಯುವಕರನ್ನು ದುರ್ಮಾಂಗಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದರೆ ಅಂತವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರಾಗೃಹದ ಅಧೀಕ್ಷಕ ಕರ್ಣ.ಬಿ.ಕ್ಷತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಆಸ್ಪತ್ರೆಯ ಮನೋ ವೈದ್ಯ ಡಾ. ಮರುಳಸಿದ್ದಪ್ಪ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಮಂಜು ನಾಥ್ ಎಲ್. ಪಾಟೀಲ್, ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಡಾ.ಸುರೇಶ್‌ ಬಾರ್ಕಿ, ಮನೋವೈದ್ಯಕೀಯ ಸಂಶೋಧನಾ ವಿದ್ಯಾರ್ಥಿ ಡಾ.ಐಶ್ವರ್ಯ, ಡಾ. ಪ್ರಶಲ್ ಹೆಚ್. ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಸಂತೋಷ್‍ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮನೋವೈದ್ಯಕೀಯ ವಿಭಾಗ, ಚಿಗಟೇರಿ ಜಿಲ್ಲಾಸ್ಪತ್ರೆ ದಾವಣಗೆರೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ, ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

error: Content is protected !!