ಸಿಎಂ ಬದಲು : ಶಿವಗಂಗಾ ಹೇಳಿಕೆಗೆ ಕುರುಬರ ಸಂಘದ ಖಂಡನೆ

ದಾವಣಗೆರೆ, ಜು. 2- ಅಹಿಂದ ವರ್ಗದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬದಲಾವಣೆ ಮಾಡಿದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಬದಲಾವಣೆ ಹೇಳಿಕೆ ನೀಡಿರುವ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರು ರಾಜೀನಾಮೆ ನೀಡಿ, ಧೈರ್ಯವಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ಬರಲಿ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪರಶುರಾಮಪ್ಪ ಸುದ್ದಿಗೋಷ್ಠಿ ಯಲ್ಲಿ ತಾಕೀತು ಮಾಡಿದರು.

ಭಾರತ ಸ್ವಾತಂತ್ರ್ಯದ ನಂತರ 76 ವರ್ಷಗಳಿಂದ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳನ್ನು ಪ್ರತಿನಿಧಿಸುವವರು ಎಷ್ಟು ಜನ ಮುಖ್ಯಮಂತ್ರಿಗಳಾಗಿದ್ದಾರೆ. ಎರಡು ವರ್ಷಗಳು ಎಸ್. ಬಂಗಾರಪ್ಪನವರು, ಎರಡು ವರ್ಷಗಳು ವೀರಪ್ಪ ಮೊಯಿಲಿ, ಐದು ವರ್ಷಗಳ ಕಾಲ ಯಶಸ್ವೀ ಮುಖ್ಯಮಂತ್ರಿಯಾಗಿ 2023 ರಲ್ಲಿ ಮತ್ತೊಮ್ಮೆ ಅಹಿಂದ ವರ್ಗಗಳ ಬೆಂಬಲದೊಂದಿಗೆ 136 ಸ್ಥಾನಗಳನ್ನು ಗಳಿಸಿ, ಮತ್ತೊಮ್ಮೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ರಾಜ್ಯದಲ್ಲಿ ಸರಾಸರಿ ಶೇ. 80 ರಷ್ಟಿರುವ ಅಹಿಂದ ವರ್ಗಗಳ ಓಟ್ ಬ್ಯಾಂಕ್  ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ಶೇ. 20 ರಷ್ಟಿರುವ ಸಮುದಾಯಗಳು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. 2023 ರಲ್ಲಿ ಮತ್ತೊಮ್ಮೆ ಅವಕಾಶ ಸಿದ್ದರಾಮಯ್ಯ ಅವರಿಗೆ ಸಿಕ್ಕಿದೆ. ಮುಂದುವರೆಯಲು ಅವಕಾಶ ನೀಡಬೇಕಾದವರು ಸರ್ಕಾರಿ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗೆ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಬಹಿರಂಗವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಕೇಳುವುದು ಯಾವ ನ್ಯಾಯ ? ಎಂದು ಪ್ರಶ್ನಿಸಿದರು.

ಶಾಸಕ ಬಸವರಾಜ ಶಿವಗಂಗಾ ಅವರು ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬದಲಾವಣೆ ಬಗ್ಗೆ ಅಪಸ್ವರದ ಮಾತುಗಳನ್ನಾಡುತ್ತಾ ಬಂದಿದ್ದಾರೆ. ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಅಹಿಂದ ವರ್ಗಗಳು ಚನ್ನಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿವೆ ಎಂದರು.

ಮುಂದಿನ ನಾಲ್ಕು ವರ್ಷಗಳ ಅವಧಿಯವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಪದಚ್ಯುತಿಗೆ ಯತ್ನಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಅಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಜಿಲ್ಲಾ ಕುರುಬರ ಸಂಘ ಎಚ್ಚರಿಕೆ ನೀಡುತ್ತದೆ ಎಂದು ಹೇಳಿದರು.

ಶಿವಗಂಗಾ ಅವರು ಮುಖ್ಯಮಂತ್ರಿ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದರೆ ಜಿಲ್ಲಾ ಕುರುಬರ ಸಂಘದಿಂದ ಹೋರಾಟ ನಡೆಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮುಖಂಡರಾದ ಲೋಕಿಕೆರೆ ಸಿದ್ಧಪ್ಪ, ದಿಳ್ಳೆಪ್ಪ, ವೆಂಕಟೇಶ್, ದೀಟೂರ್ ಚಂದ್ರು, ಹೆಚ್.ಜಿ. ಸಂಗಪ್ಪ ಪೈಲ್ವಾನ್, ಹೆಚ್.ಎನ್. ರುದ್ರಪ್ಪ, ಎಂ.ಮಂಜು ನಾಥ್, ಶಶಿಧರ್ ಉಪಸ್ಥಿತರಿದ್ದರು. 

error: Content is protected !!