ಹರಿಹರ, ಜು.2- ನಗರಸಭೆ ಕಿರಿಯ ಅಭಿಯಂತರರಾದ ಕೆ. ಮಂಜುಳಾ ಅವರಿಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ವರ್ಗಾವಣೆ ಆದೇಶ ನೀಡಲಾಗಿದ್ದರೂ ಸಹ ಇಲ್ಲಿನ ಪೌರಾಯುಕ್ತರು ರಿಲೀವ್ ಮಾಡದೇ ಇರುವ ಘಟನೆ ನಡೆದಿದೆ.
ನಗರಸಭೆಯ ಇಂಜಿನಿಯರ್ ಮತ್ತು ಎಇಇ ಸೇರಿದಂತೆ ಇಲಾಖೆಯಲ್ಲಿ ಒಬ್ಬರಿಗೊಬ್ಬರಿಗೆ ಹೊಂದಾಣಿಕೆ ಇಲ್ಲದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಗುತ್ತಿಗೆದಾರರು ಮತ್ತು ನಗರಸಭೆಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ಕೂಡಾ ನೀಡಿದ್ದರು.
ನಂತರ ಜಿಲ್ಲಾಧಿಕಾರಿಗಳು ನಗರದ ವಾಟರ್ ಇಂಜಿನಿಯರ್ ಮಂಜು ನಾಥ್‌ರನ್ನು ವರ್ಗಾವಣೆ ಮಾಡಿದರು. ಇದಾದ ಸ್ವಲ್ಪ ದಿನಗಳಲ್ಲೇ ಕೆ. ಮಂಜುಳಾರನ್ನು ವರ್ಗಾವಣೆ ಮಾಡಿದರು. ಆದರೆ ಆದೇಶ ಬಂದು ಇಪ್ಪತ್ತು ದಿನಗಳು ಕಳೆದರೂ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ರಿಲೀವ್ ಆರ್ಡರ್ ನೀಡುವುದಕ್ಕೆ ಮುಂದಾಗುತ್ತಿಲ್ಲ. ಕಾರಣ ಕೇಳಿದಾಗ ಮಂಜುಳಾ ಅವರು ಅನೇಕ ಕೆಲಸವನ್ನು ಪೆಂಡಿಂಗ್ ಇಟ್ಟಿದ್ದಾರೆ. ಅದನ್ನು ಮುಗಿಸಿದ ನಂತರ ರಿಲೀವ್ ಮಾಡುವುದಾಗಿ ಹೇಳುತ್ತಾರೆ. ಆದರೆ, ಇಂಜಿನಿಯರ್ ಮಂಜುಳಾ ಮಾತನಾಡಿ, ನನಗೆ ಹರಿಹರ ನಗರಸಭೆಗೆ ತಾತ್ಕಾಲಿಕವಾಗಿ ವಾರದಲ್ಲಿ ಮೂರು ದಿನ ಕರ್ತವ್ಯ ಮಾಡುವುದಕ್ಕೆ ಜಿಲ್ಲಾ ಕಚೇರಿಯಿಂದ ನಿಯೋಜಿಸಲಾಗಿತ್ತು. ತದನಂತರ ಆದೇಶವನ್ನು ರದ್ದುಪಡಿಸಿಸುವಂತೆ ನಾನು ಕೋರಿಕೊಂಡ ನಂತರ 19-6-2024 ರಂದು ನನಗೆ ಆದೇಶ ನೀಡಿದರು. ಆದರೆ ಪೌರಾಯುಕ್ತರು ಇನ್ನೂ ನನಗೆ ರಿಲೀವ್ ಮಾಡದೇ ಇರುವುದರಿಂದ ಇಲ್ಲಿಯೇ ಕರ್ತವ್ಯ ನಿರ್ವಹಣೆ ಮಾಡುತ್ತಿರುವುದಾಗಿ ಹೇಳಿದರು.