ದಾವಣಗೆರೆ, ಜು. 3-ರಾಜ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾದ ಪ್ರಸ್ತಾವನೆಯನ್ನು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆರ್ ಐ ಕೋಟಾಗೆ ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರವು ಎನ್ ಎಂ ಸಿ ಗೆ ಮನವಿ ಸಲ್ಲಿಸಿದೆ.
ಪ್ರಸ್ತುತ ಲಭ್ಯವಿರುವ ಸೀಟುಗಳಲ್ಲೇ ಎನ್ಆರ್ಐ ಕೋಟಾ ತೆರೆಯದೇ, ಶೇ. 15 ರಷ್ಟು ಹೆಚ್ಚುವರಿ ಸೀಟುಗಳಿಗೆ ಕರ್ನಾಟಕ ಸರ್ಕಾರವು ವಿನಂತಿಸಿದೆ. ಒಂದು ವೇಳೆ, ಎನ್ಆರ್ಐ ಕೋಟಾ ಜಾರಿಯಾದಲ್ಲಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಂಪೂರ್ಣ ವ್ಯಾಪಾರೀಕರಣಕ್ಕೆ ಪರವಾನಿಗೆ ನೀಡಿದಂತಾಗುತ್ತದೆ.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಉದ್ದೇಶಕ್ಕೆ ಇದರಿಂದ ಹೊಡೆತ ಉಂಟಾಗುತ್ತದೆ. ಸರ್ಕಾರವು ಸೀಟುಗಳನ್ನು ಹೆಚ್ಚಿಸುವುದಾದರೆ, ರಾಜ್ಯದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿಸಲಿ. ಅದನ್ನು ಬಿಟ್ಟು ಎನ್ ಆರ್ ಐ ಕೋಟಾ ಹೆಸರಿನಲ್ಲಿ ವೈದ್ಯಕೀಯ ಸೀಟುಗಳ ಮಾರಾಟ ನಡೆಸಬಾರದು ಎಂದು ಆಗ್ರಹಿಸಿದ್ದಾರೆ. ಸರ್ಕಾರವು ತನ್ನ ಈ ನಡೆಯನ್ನು ಹಿಂಪಡೆದು ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಬೇಕು. ವೈದ್ಯಕೀಯ ಶಿಕ್ಷಣದಿಂದ ದೂರ ತಳಲ್ಪಡುತ್ತಿರುವ ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅದನ್ನು ತಲುಪಿಸುವಂತೆ ಮನವಿ ಮಾಡಿದ್ದಾರೆ.