ಐದೇ ದಿನದಲ್ಲಿ ಮುಗಿದ ಅಡಿಕೆ ವಿಮೆ ಕಂತು ಗಡುವು

15 ದಿನ ಕಾಲಾವಧಿ ವಿಸ್ತರಣೆಗೆ ಪ್ರಸ್ತಾವನೆ

ದಾವಣಗೆರೆ, ಜು. 1 – ಜಿಲ್ಲೆಯಲ್ಲಿ 2024-25ರ ಸಾಲಿಗೆ ಅಡಿಕೆ ಬೆಳೆಗೆ ಸರ್ಕಾರದಿಂದ ವಿಮೆ ಪಡೆಯಲು ಕೇವಲ ಐದು ದಿನಗಳ ಕಾಲಾವಕಾಶ ನೀಡಲಾಗಿದೆ. ಜೂನ್ 27ರಿಂದ ವಿಮೆ ಕಂತು ಪಾವತಿಸಲು ಅವಕಾಶ ನೀಡಿದ್ದರೆ, ಜುಲೈ 1ರಂದೇ ಅವಧಿ ಮುಕ್ತಾಯಗೊಂಡಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 7,500 ತೋಟಗಾರಿಕಾ ರೈತರು ಬೆಳೆ ವಿಮೆ ಪಡೆದುಕೊಂಡಿದ್ದರು. ಆದರೆ, ಈ ಬಾರಿ ಕೊನೆಯ ದಿನದಂದು 4 ಸಾವಿರದಷ್ಟು ರೈತರು ಮಾತ್ರ ತೋಟಗಾರಿಕಾ ಬೆಳೆಗಳಿಗೆ ವಿಮೆ ಪಡೆದಿದ್ದಾರೆ. 

ಜಿಲ್ಲೆಯಲ್ಲಿ ಮಾವಿನ ಬೆಳೆಗೆ ವಿಮೆ ಪಡೆಯಲು ಜುಲೈ 31ರವರೆಗೆ ಅವಕಾಶ ಇದೆ. ಆದರೆ, ಪ್ರಮುಖ ಬೆಳೆಯಾದ ಅಡಿಕೆಗೆ ಮಾತ್ರ ಜುಲೈ 1ರಂದೇ ವಿಮೆಗೆ ಕೊನೆಯ ದಿನವಾಗಿತ್ತು.

ಸಾಮಾನ್ಯವಾಗಿ ಜುಲೈ 1ರಿಂದ ಜೂನ್ 30ರವರೆಗೆ ಅನ್ವಯವಾಗುವಂತೆ ಅಡಿಕೆ ಬೆಳೆಗೆ ವಿಮೆ ಸೌಲಭ್ಯ ಕಲ್ಪಿಸಲಾಗುತ್ತದೆ. ತಾಂತ್ರಿಕ ಕಾರಣದಿಂದಾಗಿ ಜಿಲ್ಲೆಯಲ್ಲಿ ತಡವಾಗಿ ಬೆಳೆ ವಿಮೆ ಮಾಡಿಸಲು ಆದೇಶ ದೊರೆತಿದ್ದು, ಐದು ದಿನಗಳಲ್ಲೇ ಅವಧಿ ಪೂರ್ಣವಾಗಿದೆ.

ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಮೆ ಪಡೆಯಲು ಜೂನ್ 26ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಜುಲೈ 27ರಂದು ಸಾಫ್ಟ್‌ವೇರ್ ಅಪ್ಡೇಟ್ ಮಾಡಲಾಗಿತ್ತು. ಅಂದಿನಿಂದ ವಿಮೆ ಕಂತು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕಂತು ಪಾವತಿಗೆ ಸಮಯ ಕಡಿಮೆ ಇರುವ ಕಾರಣ, ಅವಧಿ ವಿಸ್ತರಿಸಬೇಕು ಎಂದು ಅಂದೇ ಪ್ರಸ್ತಾವನೆ ಸಲ್ಲಿಸಲಾಗಿದೆ. ದಾವಣಗೆರೆ ಜಿಲ್ಲೆಯ ವಿಮಾ ನಿರ್ವಹಣೆಯ ಜವಾಬ್ದಾರಿಯನ್ನು ಹೆಚ್.ಡಿ.ಎಫ್.ಸಿ. ಬ್ಯಾಂಕ್‌ಗೆ ವಹಿಸಲಾಗಿದೆ. ಬ್ಯಾಂಕ್‌ನವರೂ ಸಹ ಹದಿನೈದು ದಿನಗಳ ಕಾಲ ಅವಧಿ ವಿಸ್ತರಣೆಗೆ ಪ್ರಸ್ತಾವನೆ ಕಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳೆ ವಿಮೆ ಯೋಜನೆಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ರೈತರು ಮೂವರ ಪಾಲುಗಾರಿಕೆಯೂ ಇರುತ್ತದೆ. ಹೀಗಾಗಿ ವಿಮಾ ಕಂತು ವಿಸ್ತರಣೆಗೆ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್, ಬೆಳೆ ವಿಮೆ ಅವಧಿ ವಿಸ್ತರಣೆಗಾಗಿ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಶೀಘ್ರದಲ್ಲೇ ಅನುಮತಿ ದೊರೆಯುವ ನಿರೀಕ್ಷೆ ಇದೆ ಎಂದಿದ್ದಾರೆ.

error: Content is protected !!