ಹೊನ್ನಾಳಿ, ಜೂ.30- ತಾಲ್ಲೂಕಿನ ಅರಕೆರೆ ಎ.ಕೆ.ಕಾಲೋನಿಯ ಹತ್ತಿರದ ಕಾಡಿನಂತಿರುವ ಪ್ರದೇಶದಲ್ಲಿ ಇಂದು ಸಂಜೆ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊನ್ನಾಳಿ ಮತ್ತು ಮಲೇಬೆನ್ನೂರು ಗಡಿ ಭಾಗದಲ್ಲಿರುವ ಈ ಪ್ರದೇಶದಲ್ಲಿ ಇಂದು ಕುರಿಕಾಯುವವರಿಂದ ಈ ಘಟನೆ ತಿಳಿದು ಬಂದಿದೆ.
ದೂರು ದಾಖಲು : ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದಿಂದ ಜೂನ್ 28 ರಂದು ರವಿಕುಮಾರ ಎಂಬ 30 ವರ್ಷದ ಲೈನ್‌ಮನ್ ಜೂನ್ 25 ರಿಂದ ಕಾಣೆಯಾಗಿದ್ದಾರೆ ಎಂದು ತಂದೆ ನರಸಿಂಹಪ್ಪ ಅವರು ದೂರು ಸಲ್ಲಿಸಿದ್ದರು.
ಇಂದು ಸಂಜೆ ಅರಕೆರೆ ಎ.ಕೆ.ಕಾಲೋನಿ ಹತ್ತಿರದಲ್ಲಿ ದೊರೆತಿರುವ ಶವವು ಕಾಣೆಯಾದ ವ್ಯಕ್ತಿಯ ಆಕಾರ ಮತ್ತು ವಯಸ್ಸನ್ನು ಹೋಲುತ್ತಿದ್ದು, ನಾಲ್ಕು ದಿನಗಳ ಹಿಂದೆ ನೇಣು ಹಾಕಿರುವ ಸ್ಥಿತಿಯಲ್ಲಿರುವ ಶವ ಸ್ಪಷ್ಟವಾಗಿ ಗುರುತು ಸಿಗದ ಸ್ಥಿತಿಯಲ್ಲಿದ್ದರಿಂದ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿ ಕುರುಬ ಜನಾಂಗಕ್ಕೆ ಸೇರಿದವನೆಂದು ತಿಳಿದು ಬಂದಿದೆ.ಇಂದು ದೊರೆತ ಶವವು ರವಿಕುಮಾರ ಎಂಬುವವನದೇ ಎಂದು ತನಿಖೆಯಿಂದ ತಿಳಿದುಬರಬೇಕಿದೆ.