ಹಾವೇರಿ, ಜು.28- ಸಮೀಪದ ಗುಂಡನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ 4 ಗಂಟೆ ಸುಮಾರಿನಲ್ಲಿ ನಡೆದ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.
ಗುಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಪಕ್ಕದಲ್ಲಿ ಚಾಲಕ ಲಾರಿ ನಿಲ್ಲಿಸಿದ್ದ. ಇದೇ ಮಾರ್ಗವಾಗಿ ಶುಕ್ರವಾರ ನಸುಕಿನ 3.45 ಗಂಟೆ ಸುಮಾರಿಗೆ ಅತೀ ವೇಗದಲ್ಲಿ ಹೊರಟಿದ್ದ ಟಿ.ಟಿ, ಲಾರಿಗೆ ಡಿಕ್ಕಿಹೊಡೆದು ಈ ಅಪಘಾತ ಸಂಭವಿಸಿದೆ.
ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ಗ್ರಾಮದ ಪರಶುರಾಮ್ (45), ಭಾಗ್ಯ (40), ನಾಗೇಶ್ (50), ಇವರ ಪತ್ನಿ ವಿಶಾಲಾಕ್ಷಿ (40), ಸುಭದ್ರಬಾಯಿ (65), ಪುಣ್ಯ (50), ಮಂಜುಳಾ ಬಾಯಿ (62), ಇಬರ ಇಬ್ಬರು ಮಕ್ಕಳು, ಮಾನಸ (24), ರೂಪಾ (40), ಮಂಜುಳಾ (50), ಚಾಲಕ ಆದರ್ಶ್ (23) ಮೃತರು.
ಟಿ.ಟಿ.ಯಲ್ಲಿ ಸಿಲುಕಿದ್ದ ಅರ್ಪಿತಾ (19), ಅನ್ನಪೂರ್ಣಾ (40), ಮಗುವನ್ನು ರಕ್ಷಿಸಲಾಗಿದೆ. ಇವರಲ್ಲಿ ಇಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ
ಮೃತರು ಒಂದೇ ಕುಟುಂಬದವರು ಹಾಗೂ ಸಂಬಂಧಿಕರು. ಕಳೆದ ತಿಂಗಳು ಹೊಸ ಟೆಂಪೊ ಟ್ರಾವೆಲರ್ (ಟಿ.ಟಿ) ಖರೀದಿಸಿದ್ದರು. ಅದರ ಪೂಜೆಯನ್ನು ಸ್ಥಳೀಯವಾಗಿ ಮಾಡಿದ್ದರು. ಹೊಸ ಟಿ.ಟಿ ಆಗಿದ್ದರಿಂದ ದೇವರ ದರುಶನಕ್ಕೆ ಹೋಗಿ ಬರೋಣವೆಂದು ಇತ್ತೀಚಿಗೆ ಎಮ್ಮೆಹಟ್ಟಿ ಗ್ರಾಮದಿಂದ ಹೊರಟಿದ್ದರು.
ಬೆಳಗಾವಿ ಜಿಲ್ಲೆಯ ಚಿಂಚಲಿ ಮಾಯಮ್ಮ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಬಂದಿದ್ದರು. ಅಲ್ಲಿ ದರುಶನ ಮುಗಿಸಿಕೊಂಡು ಧಾರವಾಡ-ಹಾವೇರಿ ಮಾರ್ಗವಾಗಿ ತಮ್ಮೂರಿಗೆ ಹೊರಟಿದ್ದರು ಎಂದು ಮೂಲಗಳು ತಿಳಿಸಿವೆ
ಅಪಘಾತ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ 108 ವಾಹನದ ಸಿಬ್ಬಂದಿ, ಟಿಟಿ ವಾಹನದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಿ ಅವರಿಗೆ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾ ಧಿಕಾರಿ ಅಂಶುಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು