ದಾವಣಗೆರೆ, ಜೂ. 22- ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ನೇತೃತ್ವದ `ದಾವಣಗೆರೆ ಬಾಯ್ಸ್ ಟೀಂ’ ನ ಸ್ವಯಂಕೃತ ಅಪರಾಧವೇ ಕಾರಣ ಎಂದು ವಿವಿಧ ತಾಲ್ಲೂಕುಗಳ ಬಿಜೆಪಿ ಮುಖಂಡರು ಆರೋಪಿಸಿದರು.
ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಹೊನ್ನಾಳಿ ತಾಲ್ಲೂಕು ಮಂಡಲ ಅಧ್ಯಕ್ಷ ಜಿ.ಕೆ. ಸುರೇಶ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಸೋಲಿಗೆ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ ಮತ್ತು ಎಂ.ಪಿ. ರೇಣುಕಾಚಾರ್ಯ ಅವರ ಟೀಂ ಕಾರಣ ಎಂಬ ಹೇಳಿಕೆ ಸತ್ಯಕ್ಕೆ ದೂರವಾದುದು.ಬಿಜೆಪಿ ಸೋಲಿಗೆ ಮಾಜಿ ಸಂಸದರ ಸ್ವಯಂಕೃತ ಅಪರಾಧವೇ ಕಾರಣ. ಜೊತೆಗಿದ್ದ ದಾವಣಗೆರೆ ಬಾಯ್ಸ್ ಟೀಂ ಹೊಗಳಿಕೆ ಮಾತುಗಳು, ಅತಿಯಾದ ಆತ್ಮವಿಶ್ವಾಸ, ಮುಖಂಡರನ್ನು ಸರಿಯಾಗಿ ನಡೆಸಿಕೊಳ್ಳದಿರುವುದು ಸೋಲಿಗೆ ಕಾರಣ ಎಂದು ಹೇಳಿದರು.
ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಮತ್ತು ದಾವಣಗೆರೆ ಬಾಯ್ಸ್ ಟೀಂ ಮಾತು ಕೇಳಿ ರೇಣುಕಾಚಾರ್ಯ ಅವರನ್ನು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕರೆಯಲಿಲ್ಲ. ಆದರೂ ನಾವುಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ, ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಪಡೆದ ಮತಗಳಿಗಿಂತ ಅಧಿಕ ಮತಗಳನ್ನು ಲೋಕಸಭಾ ಚುನಾವಣೆಯಲ್ಲಿ ಹಾಕಿಸುವಲ್ಲಿ ಗೆದ್ದಿದ್ದೇವೆ. ಸೋತ ಮೇಲೆ ಎಂಪಿ. ರೇಣುಕಾಚಾರ್ಯ ಅವರ ವಿರುದ್ಧ ಆರೋಪ ಮಾಡುತ್ತೀರಾ ಎಂದು ಕಿಡಿಕಾರಿದರು.
ಅಹಿಂದ ವರ್ಗದ ಮುಖಂಡ ಉಮೇಶ್ ಕುಮಾರ್ ಮಾತನಾಡಿ, ದಾವಣಗೆರೆ ಇನ್ನೂ ಚಿತ್ರದುರ್ಗ ಜಿಲ್ಲೆಯಲ್ಲಿದ್ದಂತಹ ಸಂದರ್ಭದಲ್ಲಿ ಎಸ್.ಎ. ರವೀಂದ್ರನಾಥ್ ಜಿಲ್ಲಾಧ್ಯಕ್ಷರಾಗಿದ್ದರು. ಜಿಲ್ಲಾದ್ಯಂತ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ್ದಾರೆ. ರವೀಂದ್ರನಾಥ್ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಸುಮ್ಮನಿರುವುದು ಒಳಿತು ಎಂದು ಎಚ್ಚರಿಕೆ ನೀಡಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ರವೀಂದ್ರನಾಥ್ ಅವರು ಕೇವಲ 500 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಯಶವಂತರಾವ್ ಜಾಧವ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಬಿಜೆಪಿಗೆ ಯಾಕೆ ಲೀಡ್ ಬರಲಿಲ್ಲ ಎಂದು ಪ್ರಶ್ನಿಸಿದರು.
ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿದ್ದರೂ ಗೆಲ್ಲಲು ಸಾಧ್ಯವಾಗಿಲ್ಲ. ಮೊದಲು ತನ್ನ ಕ್ಷೇತ್ರದಲ್ಲಿ ಲೀಡ್ ಕೊಡಿಸುವ ಕೆಲಸ ಮಾಡಲಿ ಎಂದು ಕಿಡಿಕಾರಿದರು.
ನಾವು ಎಲ್ಲಾ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ. ಸದ್ಯದಲ್ಲಿಯೇ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ರಾಘವೇಂದ್ರ ಮತ್ತು ರಾಷ್ಟ್ರ ನಾಯಕರಿಗೆ ದೂರು ನೀಡುತ್ತೇವೆ. ಮತ್ತೊಮ್ಮೆ ಸಭೆ ನಡೆಸಿ, ಚರ್ಚಿಸಿ ದೂರು ಸಲ್ಲಿಸಲು ನಿಯೋಗ ಹೋಗುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನೆಲಹೊನ್ನೆ ಮಂಜುನಾಥ, ಕುಬೇರಪ್ಪ, ಅರಕೆರೆ ನಾಗರಾಜ್, ಹಾಲೇಶ್, ಮಲ್ಲಿಕಾರ್ಜುನ್, ಸಂತೋಷ್ ಸೇರಿದಂತೆ ಚನ್ನಗಿರಿ, ದಾವಣಗೆರೆ ಉತ್ತರ, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಇದ್ದರು.