ಸತ್ಯ ಬದಲಿಸುವ ಶಕ್ತಿ ಇರೋದು ಬಿಜೆಪಿಗೆ ಮಾತ್ರ : ಡಿಬಿ ವ್ಯಂಗ್ಯ

ದಾವಣಗೆರೆ, ಆ.22 ‘ಒಂದು ಸುಳ್ಳನ್ನು ಹತ್ತಾರು ಸಲ ಹೇಳಿ. ಅದನ್ನು ಸತ್ಯವನ್ನಾಗಿ ಬದಲಿಸುವ ಶಕ್ತಿ ಇರುವುದು ಬಿಜೆಪಿಗೆ ಮಾತ್ರ. ಆ ಪಕ್ಷದ ನಿಜರೂಪ ಅರಿತ ಮತದಾರರು ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ರೂ. 70 ರಿಂದ ರೂ. 100ರ ವರೆಗೆ ಪೆಟ್ರೋಲ್‌ ದರ ಏರಿಕೆ ಮಾಡಿದಾಗ ಬಿಜೆಪಿಯವರು ಪ್ರತಿಭಟನೆ ಮಾಡಲಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ರೂ. ತೈಲ ದರ ಜಾಸ್ತಿ ಮಾಡಿದ್ದಕ್ಕೆ ಬೀದಿಗಿಳಿದು ಹೋರಾಟ ಶುರು ಮಾಡಿರುವುದು ಹಾಸ್ಯಾಸ್ಪದ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು. ‘ಸದ್ಯಕ್ಕೆ ರಾಜ್ಯದಲ್ಲಿ ಹುಲ್ಲು ಕಡ್ಡಿ ಅಲುಗಾಡಿದರೂ, ಅದಕ್ಕೆ ಬಡವರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿರುವುದು ಖಂಡನೀಯ.

ಗ್ಯಾರಂಟಿಗಳಿಂದಾಗಿ ಸರ್ಕಾರ ದಿವಾಳಿಯಾಗುತ್ತಿದೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಗ್ಯಾರಂಟಿಗಳಿಂದ ಕಾಂಗ್ರೆಸ್ ಜನಪ್ರಿಯತೆ ಗಳಿಸಿರುವುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದು ಡಿ.ಬಸವರಾಜ ಕುಟುಕಿದರು.

ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ವಯನಾಡ್, ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧೆ ಮಾಡುತ್ತಿರುವುದು ಕಾರ್ಯಕರ್ತರಿಗೆ ಸಂತಸ ತಂದಿದೆ ಎಂದು ಹೇಳಿದರು.

ಪಾಲಿಕೆಯ ಹಿರಿಯ ಸದಸ್ಯ ಕೆ.ಚಮನ್ ಸಾಬ್, ನಗರಸಭೆ ಮಾಜಿ  ಸದಸ್ಯ ಆರ್.ಎಚ್‌.ನಾಗಭೂಷಣ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೆ.ಎಂ. ಮಂಜುನಾಥ್‌, ಬಿ.ಎಚ್. ಉದಯ್ ಕುಮಾರ್, ಎಂ.ಕೆ. ಲಿಯಾಖತ್ ಅಲಿ, ಡಿ.ಶಿವಕುಮಾರ್, ಇಮ್ಮಿಯಾಜ್,  ಮಂಜುನಾಥ್, ಬಿ.ಎಸ್. ಸುರೇಶ್‌, ನವೀನ್ ಕುಮಾರ್ ಉಪಸ್ಥಿತರಿದ್ದರು.

error: Content is protected !!