ದಾವಣಗೆರೆ, ಜೂ. 20- ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ದೊರೆತ ಮುನ್ನಡೆಗೆ ಮೋದಿ ಪರ ಅಲೆ ಮತ್ತು ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಕಾಂಗ್ರೆಸ್ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಬುದ್ಧಿವಂತ ಮತದಾರರು ಹಣಕ್ಕೆ ಬೆಲೆ ಕೊಡದೆ ಬಿಜೆಪಿಗೆ ಮತ ಚಲಾಯಿಸುವುದರ ಮೂಲಕ ಕಾರಣರಾಗಿದ್ದಾರೆ ಎಂದು ದೂಡಾ ಮಾಜಿ ಅಧ್ಯಕ್ಷ ಎ.ವೈ. ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ಈ ಕ್ಷೇತ್ರದ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರು ಕೆಲಸ ಮಾಡಿದ್ದರ ಪ್ರತಿ ಫಲವಾಗಿ ಮತ್ತು ಬುದ್ಧಿವಂತ ಮತದಾರ ರಿಂದಾಗಿ ಬಿಜೆಪಿಗೆ ಮುನ್ನಡೆ ದೊರೆತಿದೆ ವಿನಃ ಯಾವುದೇ ನಾಯಕರಿಂದಲ್ಲ ಎಂದು ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಒಬ್ಬ ನಾಯಕ ಬೆಳೆಯುವುದು ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಆದರೆ, ಬಿಜೆಪಿ ನಾಯಕರು ಕಿತ್ತಾಡಿಕೊ ಳ್ಳುತ್ತಾ, ಕಾರ್ಯಕರ್ತರನ್ನು ದೂರವಿಟ್ಟು ಮತದಾರರು ಜಿಗುಪ್ಸೆಯಾಗುವಂತೆ ನಡೆದುಕೊಂಡಿದ್ದಾರೆ. ಗೆದ್ದರೆ ಆಡೋದಕ್ಕೆ ಬಂದಿದ್ದೆ, ಸೋತರೆ ನೋಡೋದಕ್ಕೆ ಬಂದಿದ್ದೆ ಎಂಬ ಮನಸ್ಥಿತಿಯ ನಾಯಕರು ಈಗ ಉತ್ತರದಲ್ಲಿ ಮುನ್ನಡೆಗೆ ಕಾರಣ ತಾವು ಎಂದು ಬೇರೆಯವರಿಂದ ಹೇಳಿಸಿಕೊಳ್ಳುತ್ತಿರುವುದು ವಿಷಾಧನೀಯ ಎಂದು ಅವರು ಹೇಳಿದ್ದಾರೆ.
ಕೆಲವು ಸ್ವಯಂ ಘೋಷಿತ ನಾಯಕರು ಚುನಾವಣೆ ಸಮಯದಲ್ಲಿ ಪ್ರಾಮಾಣಿಕ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಮತದಾರರು ಮತ್ತು ಕಾರ್ಯಕರ್ತರು ಯಾವುದೇ ನಾಯಕರು ಇಲ್ಲದೆ ಬಿಜೆಪಿಗೆ ಮುನ್ನಡೆ ಕೊಡಿಸುವ ಮೂಲಕ ಉತ್ತರ ನೀಡಿ ತಮ್ಮ ಘನತೆಯನ್ನು ಎತ್ತಿ ಹಿಡಿದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುನ್ನಡೆಯ ಪ್ರತಿಫಲ ತಮ್ಮದು ಎಂದು ಹೇಳಿಸಿಕೊಳ್ಳುತ್ತಾ ಕಾರ್ಯಕರ್ತರು ಮತ್ತು ಮತದಾರರನ್ನು ಅವಮಾನಿಸಬೇಡಿ. ಮತದಾರರು ಮತ್ತು ಕಾರ್ಯಕರ್ತರಿಂದ ಬೆಳೆದ ನಾಯಕರು ಮತದಾರರು ಮತ್ತು ಕಾರ್ಯಕರ್ತರನ್ನು ಅವಮಾನಿಸುವುದು ಸಲ್ಲದು ಎಂದು ಪ್ರಕಾಶ್ ತಿಳಿಸಿದ್ದಾರೆ.