ದಾವಣಗೆರೆ, ಜೂ. 19- ಕಟ್ಟಡ ಕಾರ್ಮಿಕರಿಗೆ ಅವಶ್ಯಕತೆ ಇಲ್ಲದ ಟೂಲ್, ಯುಮಿನಿಟಿ ಕಿಟ್ ಮತ್ತು ಇತರೆ ವಸ್ತುಗಳ ವಿತರಣೆಗೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ) ಅಧ್ಯಕ್ಷ ಹೆಚ್.ಜಿ. ಉಮೇಶ್ ಆವರಗೆರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊರೊನಾ ನಂತರದಲ್ಲೂ ಕಾರ್ಮಿಕರಿಗೆ ಕೊಡಬೇಕಾದ ನಿವೃತ್ತಿ ಪಿಂಚಣಿ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಸಹಾಯ ಧನಕ್ಕೆ ಮೀಸಲಾದ ಹಣವನ್ನು ಕಿಟ್ಗಳಿಗೆ ಬಳಕೆ ಮಾಡಲಾಗಿದೆ. ಕಿಟ್ ಖರೀದಿಸಬಾರದು ಎಂದು ಹೋರಾಟ ಕೂಡ ನಡೆಸಲಾಗಿತ್ತು ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾರ್ಮಿಕ ಸಚಿವರಿಗೆ ಮನವಿ ಮಾಡಲಾಗಿತ್ತು. ಆದರೂ ಕಮೀಷನ್ ಆಸೆಗಾಗಿ ಕಿಟ್ ಖರೀದಿ ಮಾಡಲಾಗಿದೆ ಎಂದು ದೂರಿದರು.
ಎಐಟಿಯುಸಿ ಮತ್ತು ಇತರೆ ಕಾರ್ಮಿಕ ಸಂಘಟನೆಗಳು ಸಭೆ ನಡೆಸಿ, ಅಂತಿಮವಾಗಿ ಕಟ್ಟಡ ಕಾರ್ಮಿಕರಿಗೆ ಯಾವುದೇ ರೀತಿಯ ಉಪಯೋಗ ಇಲ್ಲದ ಕಿಟ್ ಖರೀದಿ ಮಾಡುವುದನ್ನು ತಡೆಯಬೇಕು ಎಂದು ಹೈಕೋರ್ಟ್ ಮೊರೆ ಹೋಗಲಾಗಿತ್ತು.
ಏ.24 ರಂದು ಕಿಟ್ ವಿತರಣೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಹೇಳಿದರು.
ಕೋರ್ಟ್ ಆದೇಶದ ಹೊರತಾಗಿಯೂ ಕಿಟ್ ವಿತರಣೆಗೆ ಕಾರ್ಮಿಕ ಕಲ್ಯಾಣ ಮಂಡಳಿ ಮುಂದಾಗಿರುವುದನ್ನು ಪ್ರಶ್ನಿಸಿದರೆ, ಈ ಹಿಂದೆಯೇ ಖರೀದಿ ಮಾಡಲಾಗಿತ್ತು ಎಂದು ಉತ್ತರಿಸುತ್ತಿದ್ದಾರೆಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಬಳಿ ಚರ್ಚೆಗೆ ಹೋದಾಗ ಕಾರ್ಮಿಕ ಸಂಘಟನೆಗಳ ಮಖಂಡರೊಂದಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಬಂಡವಾಳಶಾಹಿ ಹಿನ್ನೆಲೆಯ ಹೊಂದಿರುವ ಅವರನ್ನು ಬದಲಾವಣೆ ಮಾಡುವಂತೆ ಸಿಎಂ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದರು.
ಸಚಿವ ಸಂತೋಷ್ ಲಾಡ್ ತಿಳಿಸಿರುವಂತೆ ಜುಲೈ ತಿಂಗಳ ಮೊದಲ ವಾರದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸದಿದ್ದರೆ ಜುಲೈ ಕೊನೆಯ ವಾರದಲ್ಲಿ ಧಾರವಾಡ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಅಲ್ಲಿನ ಕಾರ್ಮಿಕ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿ.ಲಕ್ಷ್ಮಣ್, ಶಿವಕುಮಾರ್ ಡಿ.ಶೆಟ್ಟರ್, ಮುರುಗೇಶ್, ಸುರೇಶ್ ಯರಗುಂಟೆ, ಸಿದ್ದೇಶ್, ಕೆ. ಸುರೇಶ್, ಡಿ. ಷಣ್ಮುಗಂ ಉಪಸ್ಥಿತರಿದ್ದರು.