ಹೊನ್ನಾಳಿ, ಜೂ.19- ಎತ್ತುಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಹೊನ್ನಾಳಿ ಪೊಲೀಸರು ಆರೋಪಿಯನ್ನು ವಾಹನ ಸಮೇತ ವಶಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ.
ತಾಲ್ಲೂಕಿನ ಚೀಲಾಪುರ ಗ್ರಾಮದ ಮಹಮ್ಮದ್ ಆಸೀಫ್ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 3 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನ, ಅಂದಾಜು 90 ಸಾವಿರ ರೂ. ಮೌಲ್ಯದ ಒಂದು ಜೊತೆ ಎತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚೀಲಾಪುರ ಗ್ರಾಮದ ವಾಸಿ ಧರ್ಮಾನಾಯ್ಕ್ ಅವರು ಎತ್ತುಗಳ ಮಾಲೀಕರಾಗಿದ್ದು, ಕಳ್ಳತನವಾದ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಕ್ರೀದ್ ಹಬ್ಬದ ಪ್ರಯುಕ್ತ ಗೊಲ್ಲರಹಳ್ಳಿ ಗ್ರಾಮದ ಬಸವಾಪಟ್ಟಣ ಕ್ರಾಸಿನ ಚೆಕ್ ಪೋಸ್ಟ್ ಬಳಿ ದನಗಳನ್ನು ತುಂಬಿ ತಂದ ಗೂಡ್ಸ್ ವಾಹನ ನಿಲ್ಲಿಸಲು ತಿಳಿಸಿದಾಗ, ಚಾಲಕ ವಾಹನ ನಿಲ್ಲಿಸಿ ಓಡಿ ಹೋಗಲು ಯತ್ನಿಸಿದವನನ್ನು ವಿಚಾರಿಸಿದಾಗ ಕಳ್ಳತನ ಮಾಡಿ ತಂದಿರುವುದು ಬೆಳಕಿಗೆ ಬಂದಿದೆ. ನ್ಯಾಯಾ ಲಯದ ಆದೇಶದ ಮೇರೆಗೆ ಎತ್ತುಗಳನ್ನು ವಾರಸುದಾರರಿಗೆ ನೀಡಲಾಗಿದೆ.
ಹೊನ್ನಾಳಿ ಪೊಲೀಸ್ ನಿರೀಕ್ಷಕ ಎಚ್.ಎಸ್. ಸುನೀಲ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಟಿ. ತಿಪ್ಪೇಸ್ವಾಮಿ, ಹರೀಶ್, ರವಿ ಎನ್. ಚೇತನ್ ಕುಮಾರ್, ಮಂಜುನಾಥ್ ಮತ್ತು ಪ್ರಸನ್ನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.