ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ : ದೂರು

ದಾವಣಗೆರೆ, ಜೂ.19- ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಹಾಗೂ  ಗರ್ಭಿಣಿಯರಿಗೆ ಮತ್ತು  ಬಾಣಂತಿಯರಿಗೆ ಕೊಡುವ ಆಹಾರ ಕಳಪೆ ಗುಣಮಟ್ಟದ್ದಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ)  ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ದೂರಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ  ಸುದೀರ್ಘ ಮನವಿ ಪತ್ರ ಸಲ್ಲಿಸಿರುವ ಅವರು ಅಂಗನವಾಡಿ ಮತ್ತು ಮುರಾರ್ಜಿ ದೇಸಾಯಿ ಶಾಲೆಗಳಲ್ಲಿ ಸುಧಾರಣೆ ತರುವಂತೆ ಒತ್ತಾಯಿಸಿದ್ದಾರೆ.

ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಗಳಲ್ಲಿ  ಕೆಲವು ಶಿಕ್ಷಕರು ಶಾಲೆಗೆ ಹೋಗದೇ ಮನೆಯಲ್ಲಿಯೇ ಕುಳಿತು ಸಂಬಳ ಪಡೆಯುತ್ತಿದ್ದಾರೆ. ಹಾಗಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಲವೊಂದು ಪದವಿ ಪೂರ್ವ ಕಾಲೇಜುಗಳಲ್ಲಿಯೂ ಸರ್ಕಾರದ ಹಣ ಸದ್ಬಳಕೆ ಮಾಡುತ್ತಿಲ್ಲ, ಅತಿಥಿ  ಉಪನ್ಯಾಸಕರ ನೇಮಕಾತಿಯಲ್ಲಿಯೂ ಸರ್ಕಾರದ ಆದೇಶ ಪಾಲಿಸುತ್ತಿಲ್ಲ.  ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಹಣ ದುರುಪಯೋಗವಾಗುತ್ತಿದೆ. ಜೆಸಿಬಿ ಬಳಸಿ ಕಾಮಗಾರಿ ಮಾಡಿ, ತಮಗೆ ಬೇಕಾದವರ ಹೆಸರನ್ನು ಕಳುಹಿಸಿ ಕೂಲಿ ಹಣವನ್ನು ಪಡೆದು ವಂಚಿಸಲಾಗುತ್ತಿದೆ. ಇದರಲ್ಲಿ ಪಂಚಾಯಿತಿಯ ಎಲ್ಲರೂ ಶಾಮೀಲಾಗಿರುತ್ತಾರೆ ಎಂದು ಅವರು ಆಪಾದಿಸಿದ್ದಾರೆ.

ಪಂಚಾಯತ್ ರಾಜ್ ಇಲಾಖೆಯು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ರಕ್ಷಣಾ ವೇದಿಕೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕವಿತಾ ತಿಳಿಸಿದ್ದಾರೆ. 

error: Content is protected !!