ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಭೀಕರ ಬರದಿಂದ ಬಸವಳಿದ ರೈತರ ಮತ್ತು ಶ್ರೀಸಾಮಾನ್ಯನ ಜೀವ ಹಿಂಡಿದೆ.
ಇದನ್ನು ವಿರೋಧಿಸಿ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಬಿಜೆಪಿ ಕಚೇರಿಯಿಂದ ಎ.ಸಿ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ದಾವಣಗೆರೆ ಉತ್ತರ ಮಂಡಲ ಅಧ್ಯಕ್ಷ ಬೇತೂರು ಸಂಗನಗೌಡ್ರು, ದಕ್ಷಿಣ ಮಂಡಲ ಅಧ್ಯಕ್ಷ ಆನಂದರಾವ್ ಸಿಂಧೆ ಮತ್ತು ಮಾಯಕೊಂಡ ಮಂಡಲ ಅಧ್ಯಕ್ಷ ಶ್ಯಾಗಲೆ ದೇವೇಂದ್ರಪ್ಪ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದು, ಜಿಲ್ಲೆಯ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಕೋರಿದ್ದಾರೆ.
ಗ್ಯಾರೆಂಟಿಗಳ ಹೆಸರಿನಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ರಾಜ್ಯದ ಪ್ರಗತಿ ಶೂನ್ಯವಾಗಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು, ಇದನ್ನು ಸರಿಪಡಿಸಲು ಹಲವಾರು ವರ್ಷ ಬೇಕು. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಸಂಗನಗೌಡ್ರು, ಆನಂದರಾವ್ ಸಿಂಧೆ, ದೇವೇಂದ್ರಪ್ಪ ಹೇಳಿದರು.