ರಾಣೇಬೆನ್ನೂರಿನ ಮಾಜಿ ಶಾಸಕ ಹಲಗೇರಿ ಡಾಕ್ಟರ್ ಇನ್ನಿಲ್ಲ

ರಾಣೇಬೆನ್ನೂರಿನ ಮಾಜಿ ಶಾಸಕ ಹಲಗೇರಿ ಡಾಕ್ಟರ್ ಇನ್ನಿಲ್ಲ

ರಾಣೇಬೆನ್ನೂರು, ಜೂ.15- ಇಲ್ಲಿನ ಮಾಜಿ ಶಾಸಕರೂ, ಧಾರವಾಡ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರೂ ಆದ ಹೆಸರಾಂತ ವೈದ್ಯ ಹಲಗೇರಿಯ ಡಾ. ಬಿ.ಜಿ.ಪಾಟೀಲ  ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ಸಂಜೆ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. 

ಮೃತರು ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಪರಿಚಯ:  ಬಳ್ಳಾರಿಯಲ್ಲಿ ಎಲ್ಎಎಂಎಸ್ ಮುಗಿಸಿ, ಧಾರವಾಡ ಮೃತ್ಯುಂಜಯಪ್ಪಗಳಲ್ಲಿ ಅಪಾರವಾದ ಭಕ್ತಿಯಿರಿಸಿಕೊಂಡು ಅವರಿಂದಲೇ ಹಲಗೇರಿಯಲ್ಲಿ ಮೃತ್ಯುಂಜಯ ಕ್ಲಿನಿಕ್ ಅನ್ನು ಉದ್ಘಾಟನೆ ಮಾಡಿಸಿದ ಡಾ.ಬಿ.ಜಿ.ಪಾಟೀಲರು ಸುತ್ತಲಿನ ಹತ್ತಾರು ಹಳ್ಳಿಗಳ ಹಾಗೂ ಪಕ್ಕದ ಹಿರೇಕೆರೂರು ತಾಲ್ಲೂಕಿನಲ್ಲೂ ಜನಪ್ರಿಯ ವೈದ್ಯರಾಗಿದ್ದರು.  

1968-69 ರಲ್ಲಿ  ಕಾಂಗ್ರೆಸ್ ಪಕ್ಷದಿಂದ  ತಾಲ್ಲೂಕು ಬೋರ್ಡ್ ಮೆಂಬರ್ ಆಗಿ ಆಯ್ಕೆಯಾಗುವುದರೊಂದಿಗೆ ರಾಜಕೀಯ ಪ್ರವೇಶಿಸಿದ  ಪಾಟೀಲರು, 1972 ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಥಮ  ಬಾರಿಗೆ  ಪರಸ್ಪರ ಎದುರಾಳಿಗಳಾದ  ಕೆ.ಬಿ.ಕೋಳಿವಾಡರ ವಿರುದ್ದ ಸೋಲನ್ನಪ್ಪಿದರು. ತದನಂತರ ಕಾಂಗ್ರೆಸ್‌ನ ಸೋಮಲಿಂಗಪ್ಪ ಅವರೊಡನೆಯೂ ಸೆಣಸಿ ಸೋಲುಂಡರು. 1983 ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಜಿ. ತಳವಾರ ಅವರನ್ನು ಬಹಳಷ್ಟು ಅಂತರದಿಂದ ಸೋಲಿಸಿ,   ಅಂದಿನ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದ ಶಾಸಕರಾಗಿದ್ದರು. 

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಆರ್. ಬೊಮ್ಮಾಯಿ  ಅವರ ಆತ್ಮೀಯರಾಗಿದ್ದು, 1985ರಲ್ಲಿ    ಧಾರವಾಡ ಜಿಲ್ಲಾ ಪರಿಷತ್ ಪ್ರಥಮ ಅಧ್ಯಕ್ಷರಾಗಿ ಪೂರ್ಣ ಅವಧಿಯನ್ನು ಪೂರೈಸಿದರು. ಎಸ್.ಆರ್. ಬೊಮ್ಮಾಯಿ ಜೊತೆಗಿನ ಆತ್ಮೀಯತೆ ಕೊರತೆಯಾಗಿ, ಆಗ  ನಡೆದ ಧಾರವಾಡ ದಕ್ಷಿಣ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲುತ್ತಾರೆ.

`ಆಕಳಿನಂತವರು ಹಲಗೇರಿ ಡಾಕ್ಟ್ರು’ ಎಂದೇ ಎಲ್ಲ ಸಮಾಜದ ಜನರೊಡನೆ ಪ್ರೀತಿಯಿಂದಿದ್ದ ಡಾ. ಬಿ.ಜಿ. ಪಾಟೀಲರು ನಂತರದಲ್ಲಿ ವೈದ್ಯ ವೃತ್ತಿಯಿಂದ ನಿವೃತ್ತರಾಗಿದ್ದರು.

ದಾವಣಗೆರೆಯಲ್ಲೂ… ಹೆಚ್ಚಿನ ಚಿಕಿತ್ಸೆ, ವೈದ್ಯರ ಸಲಹೆಗಳಿಗೆ ಈ ಭಾಗದ ಜನ ಹುಬ್ಬಳ್ಳಿಯನ್ನು ಆಶ್ರಯಿಸುವುದಿತ್ತು, ತದನಂತರ ದಾವಣಗೆರೆಯತ್ತ ಮುಖ ಮಾಡಿದ ಸಂದರ್ಭದಲ್ಲಿ ಹಲಗೇರಿಯ ಬಸಪ್ಪ ಅಂಗಡಿ ಎನ್ನುವ ವರ್ತಕ ದಾವಣಗೆರೆಯಲ್ಲಿ ವಾಸವಾಗಿದ್ದರು. ಅವರಿಗೆ ನೆಗಡಿ ಆದರೂ ಸಹ ಹಲಗೇರಿಯಿಂದ ಬಿ. ಜಿ. ಪಾಟೀಲರೇ ತೆರಳಿ ಚಿಕಿತ್ಸೆ ನೀಡಬೇಕು  ಎನ್ನುವಂತಹ ಆತ್ಮೀಯತೆ ಅಲ್ಲಿತ್ತು.

ಹುಣಸೆ ಕಟ್ಟಿಗೆ… 1962ರ ಅಂದಾಜು ಹಲಗೇರಿ ಪಕ್ಕದ ಬೆನಕನಕೊಂಡ ಗ್ರಾಮದ ನದಾಪ್‌ ಸಮಾಜದ ವ್ಯಕ್ತಿಯೊಬ್ಬ ಹುಣಸೆ ಹಣ್ಣು ಬಡಿಯುವಾಗ ಮರದ ಮೇಲಿಂದ ಕೆಳಗೆ  ಬಿದ್ದು ಹೊಟ್ಟೆಯಲ್ಲಿ  ಹಾಯ್ದು ಕಟ್ಟಿಗೆ ತುಂಡು ಬೆನ್ನಿನಲ್ಲಿ ಬಂದಿತ್ತು. ಅದನ್ನು  ತೆಗೆದು ಹೊಲಿಗೆ ಹಾಕಿ ಅವನನ್ನು ಗುಣಪಡಿಸಿದ ಡಾ. ಬಿ.ಜಿ. ಪಾಟೀಲರ ವೈದ್ಯಕೀಯ  ಕೈಗುಣದ ಬಗ್ಗೆ ಅಪಾರ ನಂಬುಗೆ ಇಲ್ಲಿನ ಜನರಲ್ಲಿ ಮನೆ ಮಾಡಿತ್ತು.

ರಾಜಕೀಯ ತಂತ್ರ… 1972 ರಲ್ಲಿ ಕಾಂಗ್ರೆಸ್‌ನಲ್ಲಿದ್ದ ಕೆ.ಬಿ. ಕೋಳಿವಾಡ ಹಾಗೂ ಬಿ.ಜಿ. ಪಾಟೀಲರು ಪರಸ್ಪರ ಚರ್ಚಿಸಿ  ಅಸೆಂಬ್ಲಿ ಚುನಾವಣೆಗೆ ಕೋಳಿವಾಡರು ಟಿಕೆಟ್ ತರುವ ತೀರ್ಮಾನ ಕೈಗೊಳ್ಳಲಾಯಿತು. ದೆಹಲಿಯಿಂದ ಟಿಕೆಟ್ ತಂದ ಕೋಳಿವಾಡರು ಹಲಗೇರಿಗೆ ತೆರಳಿ ಡಾ. ಬಿ.ಜಿ.ಪಾಟೀಲರೊಡನೆ ಚರ್ಚೆ ನಡೆಸಿ, ಮರುದಿನ ನಾಮಪತ್ರ ಸಲ್ಲಿಸಲು ತಹಶೀಲ್ದಾರ್‌ ಕಛೇರಿಗೆ ಬಂದರೆ, ಕೋಳಿವಾಡರ ವಿರುದ್ದ ಡಾ.ಬಿ.ಜಿ.ಪಾಟೀಲರೇ ಎದುರಾಳಿಯಾದ ಪ್ರಸಂಗವೂ  ನಡೆದಿತ್ತು. 

error: Content is protected !!