ದಾವಣಗೆರೆ, ಜೂ.16- ಅಖಿಲ ಭಾರತ ವೀರಶೈವ ಮಹಾಸಭಾದ 2024ರಿಂದ 29ರ ಅವಧಿಯ ಚುನಾವಣೆಯು 3 ಹಂತದಲ್ಲಿ ನಡೆಯಲಿದೆ ಎಂದು ಮಹಾಸಭಾದ ಚುನಾವಣಾಧಿಕಾರಿ ಎಂ.ಬಿ. ದ್ಯಾಬೇರಿ ತಿಳಿಸಿದ್ದಾರೆ.
ಜೂ.20ರಂದು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಮತ್ತು ಮತದಾರರ ಪಟ್ಟಿಯನ್ವಯ ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಜುಲೈ 21, ಆಗಸ್ಟ್ 25 ಮತ್ತು ಸೆಪ್ಟೆಂಬರ್ 29ರಂದು ಮಹಾಸಭಾದ ಮೂರು ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದಿದ್ದಾರೆ.
ಮೊದಲ ಹಂತದ ಚುನಾವಣೆ : ತಾಲ್ಲೂಕು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಸಮಿತಿ ರಚಿಸಲು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಜೂನ್ 27ರ ಬೆಳಗ್ಗೆ 10.30ರಿಂದ ನಾಮಪತ್ರ ಸ್ವೀಕಾರ ಪ್ರಾರಂಭವಾಗಿ, ಜುಲೈ 4ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.
ಜುಲೈ 5ರಂದು ನಾಮಪತ್ರ ಪರಿಶೀಲನೆ ನಡೆಯುವುದು. 8ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ ಮತ್ತು 21ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ.
2ನೇ ಹಂತದ ಚುನಾವಣೆ : ರಾಜ್ಯ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಮತ್ತು ಮಹಾಸಭೆಯ ಕಾರ್ಯಕಾರಿ ಸಮಿತಿ ರಚಿಸಲು 2ನೇ ಹಂತದ ಚುನಾವಣೆ ನಡೆಯಲಿದ್ದು, ಆಗಸ್ಟ್ 1ರ ಬೆಳಗ್ಗೆ 10.30ರಿಂದ ನಾಮಪತ್ರ ಸ್ವೀಕಾರ ಪ್ರಾರಂಭವಾಗಿ, ಆಗಸ್ಟ್ 7ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಆಗಸ್ಟ್ 8ರಂದು ನಾಮಪತ್ರ ಪರಿಶೀಲನೆ ಮಾಡಲಾಗುವುದು. 11ಕ್ಕೆ ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, 25ನೇ ತಾರೀಖಿಗೆ 2ನೇ ಹಂತದ ಚುನಾವಣೆ ನಡೆಯಲಿದೆ.
3ನೇ ಹಂತದ ಚುನಾವಣೆ : ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ 3ನೇ ಹಂತದ ಚುನಾವಣೆ ಜರುಗಲಿದ್ದು, ಸೆಪ್ಟೆಂಬರ್ 5ರ ಬೆಳಗ್ಗೆ 10.30ಕ್ಕೆ ನಾಮಪತ್ರ ಸ್ವೀಕಾರ ಪ್ರಾರಂಭವಾಗಿ, 11ಕ್ಕೆ ನಾಮಪತ್ರ ಸಲ್ಲಿಕೆ ಅಂತ್ಯವಾಗಲಿದೆ.
12 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 15ಕ್ಕೆ ನಾಮಪತ್ರ ಹಿಂಪಡೆಯಬಹುದು ಮತ್ತು 29ಕ್ಕೆ ಮೂರನೇ ಹಂತದ ಮತದಾನ ನಡೆಯಲಿದೆ. ಚುನಾವಣೆ ನಡೆದ ನಂತರ ಫಲಿತಾಂಶ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.