ಇಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳಕ್ಕೆ ಅನುಮತಿ : ಸರ್ಕಾರದ ಕ್ರಮಕ್ಕೆ ಎಐಡಿಎಸ್‌ಒ ಖಂಡನೆ

ದಾವಣಗೆರೆ, ಜೂ. 16- ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎಐಡಿಎಸ್‌ಓ ಖಂಡಿಸಿದೆ.

ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾದಲ್ಲಿ 96.574 ರೂ ಗಳಿಂದ 1,06,231 ರೂ.ಗಳ ವರೆಗೆ ಶುಲ್ಕ ಏರಿಸಿದ್ದು, ಟೈಪ್-1 ಕಾಲೇಜುಗಳಲ್ಲಿ 1.69 ಲಕ್ಷ ರೂ.ಗಳಿಂದ 1.86ಲಕ್ಷ ರೂಗಳವರೆಗೆ ಹಾಗೂ ಟೈಪ್-2 ಕಾಲೇಜುಗಳಲ್ಲಿ 2.37 ಲಕ್ಷ ರೂಗಳಿಂದ 2.61 ಲಕ್ಷ ರೂ.ಗಳವರೆಗೆ ಶುಲ್ಕ ಏರಿಸಲಾಗಿದೆ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಕಿಡಿಕಾರಿದ್ದಾರೆ.

ಈಗಾಗಲೇ ಯಾವುದೇ ಅಡೆ-ತಡೆ ಇಲ್ಲದೇ ಮ್ಯಾನೇಜ್ಮೆಂಟ್ ಕೋಟಾ ಅಡಿಯಲ್ಲಿ ಬರುವ ಶುಲ್ಕವನ್ನು ಮನಸೋಇಚ್ಛೆ ಖಾಸಗಿ ಕಾಲೇಜುಗಳು ಏರಿಸುತ್ತಿವೆ. 

ಬೆಂಗಳೂರಿನ ಕಾಲೇಜು ಒಂದರಲ್ಲಿ ಮ್ಯಾನೇಜ್ಮೆಂಟ್ ಸೀಟಿನ ಶುಲ್ಕ 26 ಲಕ್ಷದಷ್ಟಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ನಿಯಂತ್ರಣದ ಕೆಳಗೆ ಬರುವ ಶುಲ್ಕವನ್ನಾದರೂ ಏರಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ.

ಈ ರೀತಿ ಪ್ರತಿ ವರ್ಷ ಶೈಕ್ಷಣಿಕ ಶುಲ್ಕ ಏರಿಕೆ, ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀ ವಹಿವಾಟಿನಂತೆ ಮಾಡಲು ಸರ್ಕಾರವೇ ಅನುಮತಿ ನೀಡುತ್ತಿದೆ. ಇದು ಅತ್ಯಂತ ದುರದೃಷ್ಟಕರ. ಇದೀಗ, ಖಾಸಗಿ ಕಾಲೇಜುಗಳಲ್ಲಿ, ಇಂಜಿನಿಯರಿಂಗ್ ಶಿಕ್ಷಣ ಪಡೆಯುವುದು ಮಧ್ಯಮ ವರ್ಗದ ಕುಟುಂಬಗಳಿಗೆ ಮರೀಚಿಕೆಯಾಗಿದೆ. 

ಪ್ರತೀ ವರ್ಷ ಶುಲ್ಕ ಏರಿಕೆ ನಡೆದರೆ, ಮುಂದಿನ ದಿನಗಳಲ್ಲಿ ಮಧ್ಯಮ ವರ್ಗದ ವಿದ್ಯಾರ್ಥಿಗಳು ಯಾರೂ ಸಹ, ಖಾಸಗಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಸೇರುವುದು ಸಾಧ್ಯವಾಗುವುದಿಲ್ಲ. 

ಈಗಾಗಲೇ, ಖಾಸಗಿ ಅನುದಾನಿತ ಇಂಜಿನಿಯರಿಂಗ್ ಸೀಟುಗಳನ್ನು ಕಡಿಮೆ ಮಾಡುತ್ತಿರುವ ಸರ್ಕಾರ ಶುಲ್ಕ ಏರಿಕೆಯ ಒತ್ತಡಕ್ಕೆ ಮಣಿದಿರುವುದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ ಎಂದು ಹೇಳಿದ್ದಾರೆ.

ಈ ಕೂಡಲೇ, ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು  ಅಜಯ್ ಕಾಮತ್ ಆಗ್ರಹಿಸಿದ್ದಾರೆ.

error: Content is protected !!