ಬಿ.ಎಸ್.ಯಡಿಯೂರಪ್ಪ ಬಂಧನಕ್ಕೆ ಕಾಂಗ್ರೆಸ್ ಷಡ್ಯಂತ್ರ

ಬಿ.ಎಸ್.ಯಡಿಯೂರಪ್ಪ ಬಂಧನಕ್ಕೆ ಕಾಂಗ್ರೆಸ್ ಷಡ್ಯಂತ್ರ

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ

ದಾವಣಗೆರೆ, ಜೂ. 14- ಪೋಕ್ಸೋ ಕಾಯ್ದೆ ಅಡಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸಿದರೆ ಕಾಂಗ್ರೆಸ್ ಪತನ ಆಗುತ್ತದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿಎಂ ಸಿದ್ಧರಾಮಯ್ಯ ಅವರ ಮೇಲೆ ಒತ್ತಡ ಹೇರಿ ಬಿಎಸ್‌ವೈ ಬಂಧನಕ್ಕೆ ಷಡ್ಯಂತ್ರ್ಯ ರೂಪಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಬಂಧಿಸಬಹುದು ಎಂಬ ಗೃಹ ಸಚಿವ ಜಿ. ಪರಮೇಶ್ವರ್ ಅವರು ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತ. ಪೋಕ್ಸೋ ಕೇಸ್ ಆಗಿ 45 ಕ್ಕೂ ಹೆಚ್ಚು ದಿನಗಳಾಗಿವೆ. ಗೃಹ ಸಚಿವರೇ ಹೇಳುವಂತೆ ಮಮತಾ ಎಂಬ ಮಹಿಳೆ ಐಎಎಸ್, ಐಪಿಎಸ್ ಸೇರಿದಂತೆ 53 ಅಧಿಕಾರಿಗಳು, ಉದ್ಯಮಿಗಳ ಮೇಲೆ ಕೇಸ್ ಹಾಕಿದ್ದರು. ಈಕೆ ಮಾನಸಿಕ ಅಸ್ವಸ್ಥ ಎಂದಿದ್ದರು. ಮಮತಾ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಯಡಿಯೂರಪ್ಪ ಅವರಿಗೆ ಬಂಧನದ ನೋಟೀಸ್ ಜಾರಿ ಏಕೆ ಎಂದು ಪ್ರಶ್ನಿಸಿದರು.

ಮಮತಾ ಎಂಬ ಮಹಿಳೆ ಬದುಕಿದ್ದಾಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಗಳಿಗೆ ಅನ್ಯಾಯ ಆಗಿದೆ. ಗಂಡನ ಸಹೋದರ ಸಂಬಂಧಿಗಳು ಮುಗ್ಧ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಇಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈಗ ಆ ಮಹಿಳೆ ಸಾವನ್ನಪ್ಪಿದ್ದು, ಆಕೆ ಪುತ್ರನಿಗೆ ಆಸೆ, ಆಮಿಷವೊಡ್ಡಿ ಪ್ರಭಾವಿ ಮಂತ್ರಿಯೊಬ್ಬರು ಯಡಿಯೂರಪ್ಪ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲು ಹೂಡಿರುವ ಸಂಚು ಇದಾಗಿದೆ. ಎಲ್ಲಾ ಮಾಹಿತಿ ನನ್ನಲ್ಲಿದೆ. 53 ಜನರ ವಿಚಾರಣೆ ಯಾಕೆ ನಡೆಸಿಲ್ಲ. ಅತ್ಯಾಚಾರ ಎಸಗಿದೆ ಇಬ್ಬರನ್ನು ಇದುವರೆಗೂ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ತನ್ನ ಭ್ರಷ್ಟಾಚಾರ ಮುಚ್ಚಿ ಹಾಕಲು ಯಡಿಯೂರಪ್ಪ ಅವರ ಮೇಲೆ ಸೇಡಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾವಿ ಸಚಿವರೊಬ್ಬರು ಆಮಿಷವೊಡ್ಡಿ ಬಾಲಕಿ ಸಹೋದರನಿಂದ ಬಲವಂತವಾಗಿ ಕೇಸು ದಾಖಲಿಸಿದ್ದಾರೆ. ಎರಡು ದಿನಗಳ ಹಿಂದೆ ಸಿಐಡಿಯವರು ನೋಟೀಸ್ ಕೊಟ್ಟದ್ದಾರೆ. 

ಜೂ. 17 ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದ ಯಡಿಯೂರಪ್ಪ ತಲೆಮರೆಸಿಕೊಂಡಿಲ್ಲ. ಸಾಕ್ಷ್ಯ ನಾಶ ಮಾಡ್ತಾರೆ ಎಂಬ ಕಾರಣವೊಡ್ಡಿ ವಶಕ್ಕೆ ಸಿಐಡಿ ಅಧಿಕಾರಿಗಳು ಕೇಳುತ್ತಿದ್ದಾರೆ. ಯಡಿಯೂರಪ್ಪ ಮತ್ತು ಕೆಲವರನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು. ಸರ್ಕಾರ ಪತನವಾಗುತ್ತದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಬಿಎಸ್‌ವೈ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆಂದು ದೂರಿದರು.

ದ್ವೇಷದ ರಾಜಕಾರಣವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಮೊದಲು 53 ಜನರನ್ನು ಬಂಧಿಸಿ, ಬಾಲಕಿಯ ಹಿಂದೆ ಯಾರಿದ್ದಾರೆಂದು ನನಗೆ ಗೊತ್ತು. ಸದ್ಯದಲ್ಲಿಯೇ ಬಹಿರಂಗಪಡಿ ಸುತ್ತೇನೆ. ಸುಳ್ಳು ಕೇಸಿಗೆ ಯಾವುದೇ ಕಾರಣಕ್ಕೂ ಬಿಎಸ್‌ವೈ ಬಗ್ಗಲ್ಲ, ಜಗ್ಗಲ್ಲ. ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್, ವಕ್ತಾರ ಬಿ.ಎಂ. ಸತೀಶ್ ಕೊಳೇನಹಳ್ಳಿ ಉಪಸ್ಥಿತರಿದ್ದರು.

error: Content is protected !!