ಕೊಲೆಗೀಡಾದ ರೇಣುಕಾಸ್ವಾಮಿ ಚಿತ್ರದುರ್ಗ ನಿವಾಸದಲ್ಲಿ ಸ್ಮಶಾನ ಮೌನ

ಕೊಲೆಗೀಡಾದ ರೇಣುಕಾಸ್ವಾಮಿ ಚಿತ್ರದುರ್ಗ ನಿವಾಸದಲ್ಲಿ ಸ್ಮಶಾನ ಮೌನ

ಚಿತ್ರದುರ್ಗ, ಜೂ. 11 – ಚಿತ್ರನಟ ದರ್ಶನ್ ಮತ್ತು ಆತನ ಗ್ಯಾಂಗ್‍ನಿಂದ ಕೊಲೆಗೀಡಾದ ರೇಣುಕಾಸ್ವಾಮಿಯ ಚಿತ್ರದುರ್ಗ ನಿವಾಸದಲ್ಲಿ ಸ್ಮಶಾನ ಮೌನ ಆವರಿಸಿದೆ. ನಟ ದರ್ಶನ್ ಮತ್ತು ಆತನ ಗ್ಯಾಂಗ್ ನಡೆಸಿದ ಹಲ್ಲೆಯಿಂದಾಗಿ ಕೊಲೆಗೀಡಾಗಿರುವ ರೇಣುಕಾಸ್ವಾಮಿ ಚಿತ್ರದುರ್ಗ ಮೂಲದವರಾಗಿದ್ದು, ಸ್ಥಳೀಯ ಮೆಡಿಕಲ್ ಸ್ಟೋರ್‍ವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. 

ಕೆಇಬಿ ನಿವೃತ್ತ ನೌಕರನ ಮಗನಾಗಿರುವ ರೇಣುಕಾಸ್ವಾಮಿ, ತಂದೆ-ತಾಯಿ, ಪತ್ನಿ ಮತ್ತು ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಹೊಂದಿರುವ ರೇಣುಕಾಸ್ವಾಮಿ, ಚಿತ್ರನಟ ದರ್ಶನ್ ಅಭಿಮಾನಿಯೂ ಕೂಡ ಆಗಿದ್ದರು. 

ದರ್ಶನ್ ಕುಟುಂಬದ ಬಿರುಕು ಸರಿಪಡಿಸಲು ಹೋಗಿ, ಪವಿತ್ರ ಗೌಡ ಎಂಬುವವರಿಗೆ ವಾಟ್ಸಾಪ್ ಮೂಲಕ ಮೆಸೇಜ್ ಹಾಕಿದ್ದರು ಎಂಬ ಕಾರಣಕ್ಕೆ ದರ್ಶನ್ ಮತ್ತು ಆತನ ಬೆಂಬಲಿಗರು ಬೆಂಗಳೂರಿಗೆ ಕರೆಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎನ್ನಲಾಗಿದೆ. 

ಕೊಲೆಗೀಡಾದ ರೇಣುಕಾಸ್ವಾಮಿಯ ದೇಹವನ್ನು ಕೆಂಗೇರಿ ಸಮೀಪದ ಮೋರಿಯೊಂದರಲ್ಲಿ ಬಿಸಾಕಿ ಹೋಗಿದ್ದು, ಸೋಮವಾರ ಬೆಳಿಗ್ಗೆ ಅಷ್ಟೇ ನಾಯಿಗಳು ಎಳೆತಂದ ಕಾರಣಕ್ಕೆ ರೇಣುಕಾಸ್ವಾಮಿ ಮೃತ ದೇಹ ಎಂದು ಗುರುತಿಸಿರುವ ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಪೊಲೀಸರು ದೂರು ದಾಖಲಿಸಿಕೊಂಡು ಮೊಬೈಲ್ ಕರೆಗಳನ್ನು ಟ್ರಾಪ್ ಮಾಡಲಾಗಿದ್ದು, ನಂತರ ಕೊಲೆಗೆ ಪ್ರಮುಖ ಕಾರಣವಾಗಿರುವ ನಟ ದರ್ಶನ್ ಅವರ ಸುತ್ತವೇ ಕೊಲೆ ಪ್ರಕರಣ ಸುತ್ತಿಕೊಂಡಿದ್ದು, ದರ್ಶನ್ ಸೇರಿ ಹನ್ನೊಂದು ಜನರನ್ನು ಬಂಧಿಸಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಕೊಲೆ ಕೇಸು ದಾಖಲಿಸಿ, ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದರು. 

ನಟ ದರ್ಶನ ಮತ್ತು ಗ್ಯಾಂಗ್‍ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ಕೆಇಬಿ ನಿವೃತ್ತ ನೌಕರರೊಬ್ಬರ ಮಗನಾಗಿದ್ದು, ಉತ್ತಮವಾಗಿ ಜೀವನ ನಡೆಸುತ್ತಿದ್ದರು. ಸ್ಥಳೀಯ ಮೆಡಿಕಲ್ ಸ್ಟೋರ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಸಹಜವಾಗಿ ಚಿತ್ರನಟ ದರ್ಶನ್ ಅವರ ಅಭಿಮಾನಿಯೂ ಆಗಿದ್ದರು. ಕಳೆದ ವರ್ಷ ಜೂನ್ 28ಕ್ಕೆ ವಿವಾಹವಾಗಿದ್ದ ರೇಣುಕಾಸ್ವಾಮಿ ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ಹೋಗಿರುವುದು ಇಡೀ ಸಂಬಂಧಿಕರಲ್ಲಿ ತೀವ್ರ ಆತಂಕಕ್ಕೆ ಈಡು ಮಾಡಿದ್ದು, ಸಂಬಂಧಿಕರು ಮತ್ತು ಕುಟುಂಬದಲ್ಲಿ ಸ್ಮಶಾನ ಮೌನವೇ ಆವರಿಸಿದೆ. 

ಕೊಲೆಗೀಡಾದ ರೇಣುಕಾಸ್ವಾಮಿಯ ನಿವಾಸದ ಬಳಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಕೆ.ಎಂ. ವೀರೇಶ್, ಷಡಾಕ್ಷರಯ್ಯ ಸ್ವಾಮಿ ಸೇರಿದಂತೆ ಹಲವು ಜನ ವೀರಶೈವ ಲಿಂಗಾಯತರು ಜಮಾವಣೆಗೊಂಡಿದ್ದು, ನಟ ದರ್ಶನ ಮತ್ತು ಗ್ಯಾಂಗ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾನೂನು ಕೈಗೆತ್ತಿಕೊಂಡಿರುವ ದರ್ಶನ್ ಅವರನ್ನು ಆರೋಪಿ ನಂ:1 ಎಂದು ಗುರುತಿಸಿ, ಮತ್ತು ಆತನ ಗ್ಯಾಂಗ್‌  ಕೊಲೆಗಡುಕರ ಗ್ಯಾಂಗ್ ಎಂದು ಪರಿಗಣಿಸಿ, ಕಠಿಣ ಕಾನೂನು ಕ್ರಮದ ಮೂಲಕ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವೀರಶೈವ ಪದ್ಧತಿಯಂತೆ ಶವ ಸಂಸ್ಕಾರ : ನಟ ದರ್ಶನ್ ಮತ್ತು ಗ್ಯಾಂಗ್‍ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿಯ ಮೃತ ದೇಹವನ್ನು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತರಲಾಗಿದ್ದು, ವೀರಶೈವ ಜನಾಂಗದ ಪದ್ಧತಿಯಂತೆ ಶವ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದು, ಶವ ಸಂಸ್ಕಾರದ ಸಂದರ್ಭದಲ್ಲಿ ಸಮಾಜದ ಮುಖಂಡರು ಮತ್ತು ಬಂಧು-ಬಳಗದವರು ಭಾಗಿಯಾಗುವ ನಿರೀಕ್ಷೆಗಳಿವೆ.

ಚಿತ್ರನಟ ದರ್ಶನ್ ಮತ್ತು ಗ್ಯಾಂಗ್ ನವರು ಕೊಲೆಮಾಡಿರುವ ರೇಣುಕಾಸ್ವಾಮಿ ಕುಟುಂಬದವರು ಸೌಮ್ಯ ಸ್ವಭಾವದವರಾಗಿದ್ದು, ಯಾರೊಂದಿಗೂ ಕೂಡ ಇದುವರೆಗೂ ವಿವಾದಗಳನ್ನು ಮಾಡಿಕೊಂಡವರಲ್ಲ. ಸುತ್ತಮುತ್ತಲ ಜನರೊಂದಿಗೆ ಸ್ನೇಹಪರರಾಗಿ ಬಾಳಿ ಬದುಕಿದವರು. ಅಂತಹ ರೇಣುಕಾಸ್ವಾಮಿಯನ್ನು ಕರೆದೊಯ್ದ ದರ್ಶನ್ ಮತ್ತು ಗ್ಯಾಂಗ್‌ನ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ವೀರಶೈವ ಮುಖಂಡರು ಒತ್ತಾಯಿಸಿದ್ದಾರೆ.

error: Content is protected !!