ವೇತನ ಬಿಡುಗಡೆಗೆ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರ ಒತ್ತಾಯ

ಹರಿಹರ, ಜೂ.2- ತಾಲ್ಲೂಕಿನ ಅಂಗನವಾಡಿ ಶಿಕ್ಷಕಿಯರು ಮತ್ತು  ಸಹಾಯಕಿಯರಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡದೇ ಇರುವುದರಿಂದ ಶಿಕ್ಷಕಿಯರು ಮತ್ತು ಸಹಾಯಕಿಯರು ಪ್ರತಿನಿತ್ಯ ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ಕೂಡಲೇ ವೇತನ ನಿಡುವಂತೆ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರ ಸಂಘದ ರಾಜ್ಯ ಉಪಾಧ್ಯಕ್ಷರಾದ ಬಿ.ಎಸ್. ನಿರ್ಮಲ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. 

ತಾಲ್ಲೂಕಿನಲ್ಲಿ ಸುಮಾರು 259 ಅಂಗನವಾಡಿ ಕೇಂದ್ರಗಳು ಇದ್ದು, ಇದರಲ್ಲಿ 259 ಶಿಕ್ಷಕಿಯರು ಮತ್ತು 259 ಸಹಾಯಕಿಯರು ಸೇರಿ 518 ಜನರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ ಕೇವಲ ಮಕ್ಕಳಿಗೆ ಪಾಠವನ್ನು ಹೇಳಿಕೊಡುವುದು, ಅವರನ್ನು ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡು ಹೋಗುವುದು ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಬರುವಂತ ಕೆಲಸ ಕಾರ್ಯಗಳ ಜೊತೆಗೆ ಸಾರ್ವಜನಿಕರಿಗೆ ಉಪಯುಕ್ತತೆ ಆಗುವಂತಹ ಅನೇಕ ಕೆಲಸಗಳನ್ನು ಅಂಗನವಾಡಿ ಶಿಕ್ಷಕರು ಹಗಲು ರಾತ್ರಿ ಎನ್ನದೇ ಶ್ರಮವಹಿಸಿ ಮಾಡಿಕೊಂಡು ಬರುತ್ತಿದ್ದಾರೆ. 

ಆದರೆ, ಸರ್ಕಾರ ಅನೇಕ ಕೆಲಸಕ್ಕೆ, ಬಳಸಿಕೊಂಡು ಶಿಕ್ಷಕಿಯರಿಗೆ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ವೇತನವನ್ನು ನೀಡುತ್ತಾ ಹೋದರೆ ಶಿಕ್ಷಕಿಯರು ಮತ್ತು ಸಹಾಯಕಿಯರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಹೇಗೆ ಕೊಡಿಸಬೇಕು. ಮನೆಯನ್ನು ಯಾವ ರೀತಿ ನಿರ್ವಹಣೆ ಮಾಡಬೇಕು. ಸಾಲ ಮಾಡಿಕೊಂಡಿದ್ದರೆ ಅದನ್ನು ಯಾವ ರೀತಿ ತೀರಿಸಬೇಕು. ಆಗಾಗಿ ಏನು ಮಾಡಬೇಕೆಂದು ತೋಚದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಸಿಡಿಪಿಓ ಪೂರ್ಣಿಮಾ ದೂರವಾಣಿಯಲ್ಲಿ ಮಾತನಾಡಿ, ಹಣ ಬಿಡುಗಡೆ ಬಗ್ಗೆ ಟಿ.ಪಿ. ಗೆ ಬರೆಯಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆ ಆದ ನಂತರ ಶಿಕ್ಷಕಿಯರು ಮತ್ತು ಸಹಾಯಕಿಯರ ವೇತನವನ್ನು ಆದಷ್ಟು ಬೇಗ ನೀಡಲಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಎಸ್.ಬಿ. ಲಲಿತಾ , ರೇಣುಕಮ್ಮ, ಸುಧಾ, ಮಂಜುಳಾ, ಗೀತಮ್ಮ, ಸುಜಾತ, ಲಲಿತಾ ಇತರರು ಹಾಜರಿದ್ದರು.

error: Content is protected !!