ದಾವಣಗೆರೆ, ಜೂ. 2- ಕಾಂಗ್ರೆಸ್ ಸರ್ಕಾರ ಲೂಟಿ ಜೊತೆಗೆ ಅಧಿಕಾರಿಗಳ ಜೀವಗಳನ್ನು ಬಲಿ ಪಡೆಯುತ್ತಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕರ್ನಾಟಕ ಕಂಡು ಕೇಳರಿಯದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗವಾಗಿದೆ. ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ಬಂದಾಗಲೇ ಅಧಿಕಾರಿಗಳ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆದಿರುವುದು ಕಾಣುತ್ತಿದ್ದೇವೆ ಎಂದರು. ಈ ಹಗರಣ ಸಂಬಂಧ 3-4 ಅಧಿಕಾರಿಗಳನ್ನು ಅಮಾನತ್ತು ಮಾಡಿದರೆ ಸಾಲದು. ಸಮಯ ವ್ಯರ್ಥ ಮಾಡದೇ ಸಂಬಂಧಪಟ್ಟ ಸಚಿವರ ರಾಜೀನಾಮೆಯನ್ನು ಪಡೆಯಬೇಕು. ಸಿಎಂ ಸಚಿವರನ್ನು ರಕ್ಷಿಸುವ ಸಲುವಾಗಿ ನಾಡಿನ ವಾಲ್ಮೀಕಿ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕಿಡಿ ಕಾರಿದರು.
ನಮ್ಮ ಸಮಾಜದ ಎಸ್ಟಿ ಮೀಸಲು ಕ್ಷೇತ್ರದಲ್ಲಿ ಗೆದ್ದಂತಹ 15 ಜನರ ಪೈಕಿ ಯಾವೊಬ್ಬ ಶಾಸಕರಾಗಲೀ, ಮಂತ್ರಿಗಳಾಗಲೀ ಇಲ್ಲಿಯವರೆಗೂ ಪ್ರಕರಣದ ವಿಚಾರದ ಬಗ್ಗೆ ಧ್ವನಿ ಎತ್ತಿಲ್ಲವೆಂದರೆ ಇದರಲ್ಲಿ ನಿಮ್ಮ ಪಾಲು ಎಷ್ಟು ಇದೆ ಎಂಬುದನ್ನು ಹೇಳಬೇಕಾಗುತ್ತದೆ. ಈ ಹಣ ನಮ್ಮ ರಾಜ್ಯದ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟ ಹಣ. ಈ ಪ್ರಕರಣವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಈ ರೀತಿಯ ಘಟನೆ ಮರುಕಳಿಸದಂತೆ ಸರ್ಕಾರ ಕ್ರಮ ವಹಿಸಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತ್ಯಾವಣಗಿ ಕೃಷ್ಣಕುಮಾರ್, ದುರುಗೇಶ್, ಸಾಲಕಟ್ಟೆ ಸಿದ್ಧಪ್ಪ, ಲೋಕೇಶಪ್ಪ, ತ್ಯಾವಣಗಿ ರಮೇಶ್, ಹೊಸಳ್ಳಿ ವೆಂಕಟೇಶ್, ರಾಜು ಅಳಗೋಡಿ ಉಪಸ್ಥಿತರಿದ್ದರು.