ದಾವಣಗೆರೆ, ಮೇ 30 – ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಶತಕ ದಾಟಿದ್ದ ಆಕಾಂಕ್ಷಿಗಳ ಪಟ್ಟಿ ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವ ರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರುಗಳೊಂದಿಗೆ ಚರ್ಚಿಸಿ ಶಾರ್ಟ್ ಲಿಸ್ಟ್ ಅಂತಿಮ ಹಂತಕ್ಕೆ ಬಂದಿದ್ದು, ಪರಿಶಿಷ್ಟ ಜಾತಿಯ ಖೋಟಾದಡಿ ಭೋವಿ ಸಮುದಾಯದ ಡಿ. ಬಸವರಾಜ್ ಹೆಸರು ಮುಂಚೂಣಿಯಲ್ಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಡಿ. ಬಸವರಾಜ್ ಅವರು ಕಳೆದ ನಾಲ್ಕು ದಶಕಗಳಿಂದ ವಿದ್ಯಾರ್ಥಿ ಕಾಂಗ್ರೆಸ್‌ನಿಂದ ಬಂದವರು. ಯುವಕ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ ಸೇರಿದಂತೆ ಕೆಪಿಸಿಸಿ ಚುನಾಯಿತ ಸದಸ್ಯರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಿ. ಬಸವರಾಜ್ ಎಂಎಲ್‌ಎ ಹಾಗೂ ಎಂಪಿ ಟಿಕೆಟ್‌ಗಾಗಿ ಪ್ರಯತ್ನ ಪಟ್ಟಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಬಸವರಾಜ್ ಅವರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಈ ಬಾರಿ ಎಂಎಲ್‌ಸಿ ಟಿಕೆಟ್ ಸಿಗುವ ಸಂಭವ ಇದೆ ಎಂದು ತಿಳಿದು ಬಂದಿದೆ.