ದಾವಣಗೆರೆ, ಮೇ 28- ಚನ್ನಗಿರಿಯಲ್ಲಿ ನಡೆದ ಆದಿಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಡಿವೈಎಸ್ಪಿ, ಸಿಪಿಐ ಹಾಗೂ ಪಿಎಸ್‌ಐ ಅವರನ್ನು ಅಮಾನತ್ತು ಮಾಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಪೊಲೀಸ್ ಕುಟುಂಬಗಳ ಕಲ್ಯಾಣ ಸಂಘ- ಕರ್ನಾಟಕದ ಅಧ್ಯಕ್ಷ ಹೊನ್ನಾಳಿಯ ಗುರುಪಾದಯ್ಯ ಮಠದ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ನುಗ್ಗಿ ಧಾಂದಲೆ ನಡೆಸಿ, ಹಲ್ಲೆ ನಡೆಸಿ, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿ, ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಅಲ್ಲಿನ ಶಾಸಕ ಹರೀಶ್ ಪೂಂಜಾ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಕಾನೂನು ರಕ್ಷಿಸುವ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬೇಸರಗೊಂಡಿದ್ದಾರೆ. ಕಾನೂನು ಪರಿಪಾಲನೆ ಮಾಡುತ್ತಿರುವ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವುದು, ಸೂಕ್ತ ಭದ್ರತೆ ನೀಡುವುದು ಸರ್ಕಾರದ ಮತ್ತು ಆ ಭಾಗದ ಜನಪ್ರತಿನಿಧಿಗಳ, ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಇಂತಹ ಘಟನೆಗಳು ನಡೆದಾಗ ಸರ್ಕಾರ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು, ಅಮಾನತ್ತು ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಈ ರೀತಿ ಕ್ರಮಗಳು ಪೊಲೀಸರ ಕರ್ತವ್ಯ ನಿರ್ವಹಣೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಅವರ ಆತ್ಮಸ್ಥೈರ್ಯ ಕುಗ್ಗಿದಂತಾಗಿ ಸಾಮಾಜಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ಸಮಾಜ ಘಾತುಕ ಶಕ್ತಿಗಳಿಗೆ, ಪುಂಡ, ಪೋಕರಿಗಳಿಗೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಗೃಹ ಸಚಿವರು ಚನ್ನಗಿರಿಯಲ್ಲಿ ನಡೆದ ಆದಿಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಅಮಾನತ್ತು ವಾಪಾಸ್ ಪಡೆಯಬೇಕು. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ, ಪೊಲೀಸರ ವಾಹನಗಳನ್ನು ಜಖಂಗೊಳಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಾನೂನು ಉಲ್ಲಂಘನೆ ಮಾಡಿ, ದುಂಡಾವರ್ತನೆ ತೋರುವ ಜನಪ್ರತಿನಿಧಿಗಳು ಮತ್ತು ಕಿಡಿಗೇಡಿಗಳು, ಸಮಾಜ ಘಾತುಕ ಶಕ್ತಿಗಳಿಗೆ ಕಠಿಣ ಸಂದೇಶಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿನಯ್ ಎಂ. ವಗ್ಗರ್, ಆರುಂಡಿ ನಾಗರಾಜ್, ಹನುಮಂತಪ್ಪ ಸೊರಟೂರು, ಧನಂಜಯ ಉಪಸ್ಥಿತರಿದ್ದರು.